"ಹಿಜಾಬ್‌ ವಿಷಯವು ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದ್ದು, ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆ ಉದ್ಭವಿಸುವುದಿಲ್ಲ"

Update: 2022-09-12 16:18 GMT

ಹೊಸದಿಲ್ಲಿ: ಹಿಜಾಬ್‌ ವಿಷಯವು ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದ್ದು, ಹಿಜಾಬ್ ನಿಷೇಧ ಪ್ರಕರಣದಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅರ್ಜಿದಾರರೊಬ್ಬರ ಪರ ಹಾಜರಾದ ಹಿರಿಯ ವಕೀಲ ಯೂಸುಫ್ ಮುಚ್ಚಾಲಾ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ. 

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ರಾಜ್ಯ ಸರ್ಕಾರದ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು  ನಡೆಸುತ್ತಿದೆ.

ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಸಂವಿಧಾನದ 25 ನೇ ವಿಧಿ (ಧರ್ಮವನ್ನು ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯ) ಅಡಿಯಲ್ಲಿ ಅದನ್ನು ರಕ್ಷಿಸಲಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಸೋಮವಾರದ ನಡೆದ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್ ಪ್ರಕರಣದಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಅಂಶವನ್ನು ನೋಡಬಾರದು ಹಾಗೂ ಖುರಾನ್ ಅನ್ನು ವ್ಯಾಖ್ಯಾನಿಸಬಾರದು ಎಂದು ಅರ್ಜಿದಾರರು ವಾದಿಸಿದ್ದು, ಈ ವಿಷಯವು ವ್ಯಕ್ತಿಯ ಮೂಲಭೂತ ಹಕ್ಕಿಗೆ ಸಂಬಂಧಿಸಿದೆ ಹೇಳಿದ್ದಾರೆ.

"ನ್ಯಾಯಾಲಯವು ಧಾರ್ಮಿಕ ಗ್ರಂಥಗಳನ್ನು ವ್ಯಾಖ್ಯಾನಿಸಬಾರದು ಎಂದು ಸಂವಿಧಾನವು ಸ್ಪಷ್ಟವಾಗಿ ಹೇಳಿದೆ" ಎಂದು   ವಕೀಲರು ನ್ಯಾಯಾಲಯದ ಗಮನಕ್ಕೆ ತಿಳಿಸಿದರು. “ಆದರೆ, ಹೈಕೋರ್ಟ್ ಮಾಡಿದ್ದು ಅದನ್ನೇ. ಖುರಾನ್ ಅನ್ನು ಅರ್ಥೈಸಲು ಸುಸಜ್ಜಿತ ನಿಯಮಗಳಿವೆ” ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಹೈಕೋರ್ಟ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯನ್ನು ಅರ್ಜಿದಾರರು ಎತ್ತಿದ್ದರು ಎಂದು ನ್ಯಾಯಮೂರ್ತಿ ಧುಲಿಯಾ ಗಮನಸೆಳೆದರು.

 
“ಯಾರೋ ಉತ್ಸಾಹದಲ್ಲಿ ತಪ್ಪಾಗಿ [ಅಗತ್ಯವಾದ ಧಾರ್ಮಿಕ ಆಚರಣೆಯ ಪ್ರಶ್ನೆಯನ್ನು ಎತ್ತಿದ್ದಾರೆ]. ಆದರೆ ನ್ಯಾಯಾಲಯ ತನ್ನ ಮಿತಿಯನ್ನು ಅರಿಯಬೇಕು. ಅದೇ ಕ್ಷಣದಲ್ಲಿ, ನ್ಯಾಯಾಲಯವು ಅದನ್ನು ಕೈಬಿಡಬೇಕು, ಅದು ಅಗತ್ಯವಾದ ಧಾರ್ಮಿಕ ಆಚರಣೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಬೇಕು” ಎಂದು ವಕೀಲ ಮುಚ್ಚಾಲಾ ವಾದಿಸಿದ್ದಾರೆ.

ಸಂವಿಧಾನದ 25 ನೇ ವಿಧಿಯು ವ್ಯಕ್ತಿಗಳ ಹಕ್ಕುಗಳ ಬಗ್ಗೆ ವ್ಯವಹರಿಸುತ್ತದೆ ಮತ್ತು ಸರ್ಕಾರವು ವಿಧಿಯ ಅಡಿಯಲ್ಲಿ ಕಾನೂನು ಮಾಡಿದರೆ ಮಾತ್ರ ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯು ಅನ್ವಯಿಸುತ್ತದೆ ಎಂದು ಹಿರಿಯ ವಕೀಲರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News