ವಿಶ್ವಸಂಸ್ಥೆ ಮಾನವಹಕ್ಕು ಆಯೋಗದಲ್ಲಿ ಶ್ರೀಲಂಕಾ ವಿರುದ್ಧ ಧ್ವನಿ ಎತ್ತಿದ ಭಾರತ

Update: 2022-09-13 02:27 GMT

ಹೊಸದಿಲ್ಲಿ: ಶ್ರೀಲಂಕಾದಲ್ಲಿ ಬುಡಕಟ್ಟು ತಮಿಳರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರದ ಕ್ರಮ ವಿರುದ್ಧ ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ ಸಭೆಯಲ್ಲಿ ಭಾರತ ಧ್ವನಿ ಎತ್ತಿದೆ.

ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯ ಸಂಪೂರ್ಣ ಅನುಷ್ಠಾನದ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸುವ ಲಂಕಾ ಸರ್ಕಾರದ ಬದ್ಧತೆ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣಿಸುತ್ತಿಲ್ಲ. ಈ ದ್ವೀಪರಾಷ್ಟ್ರ ತನ್ನ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ತಕ್ಷಣ ಹಾಗೂ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.

ಭಾರತದ ಆಕ್ಷೇಪದ ನಡುವೆಯೂ ಚೀನಾದ ಬೇಹುಗಾರಿಕೆ ಹಡಗು ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ಲಂಗರು ಹಾಕಲು ಶ್ರೀಲಂಕಾ ಸರ್ಕಾರ ಅವಕಾಶ ಮಾಡಿಕೊಟ್ಟ ಬಳಿಕ ಶ್ರೀಲಂಕಾ ಸರ್ಕಾರದ ಕ್ರಮ ಅಥವಾ ನಿಷ್ಕ್ರಿಯತೆ ಬಗ್ಗೆ ಭಾರತ ಸಾರ್ವಜನಿಕವಾಗಿ ಆಕ್ಷೇಪಿಸಿರುವುದು ಇದೇ ಮೊದಲು.

ಶ್ರೀಲಂಕಾದ ಮಾನವಹಕ್ಕು ಸ್ಥಿತಿಗೆ ಸಂಬಂಧಿಸಿದಂತೆ ಭಾರತದ ಒಟ್ಟಾರೆ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲವಾದರೂ, ಶ್ರೀಲಂಕಾ ತಮಿಳರ ನ್ಯಾಯ, ಘನತೆ ಮತ್ತು ಶಾಂತಿ ವಿಚಾರಕ್ಕೆ ಬೆಂಬಲ ನೀಡುವುದು ಹಾಗೂ ಶ್ರೀಲಂಕಾದ ಏಕತೆ, ಸ್ಥಿರತೆ ಮತ್ತು ಸಮಗ್ರತೆಯನ್ನು ಬೆಂಬಲಿಸುವುದು ಭಾರತದ ಎರಡು ಪ್ರಮುಖ ಪರಿಗಣನೆ ಅಂಶಗಳಾಗಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಚೀನಾ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ಭಾರತ, ಹಿಂದೂ ಮಹಾಸಾಗರದ ದ್ವೀಪರಾಷ್ಟ್ರದಲ್ಲಿ ಆರ್ಥಿಕ ಸಂಘರ್ಷವು ಸಾಲ ಚಾಲಿತ ಆರ್ಥಿಕತೆಯ ಇತಿಮಿತಿಗಳು ಹಾಗೂ ಜನರ ಜೀವನಮಟ್ಟದ ಮೇಲೆ ಅದರ ಪರಿಣಾಮಗಳು ಏನು ಎನ್ನುವುದನ್ನು ತೋರಿಸಿದೆ ಎಂದು ಹೇಳಿದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತ ಈ ವರ್ಷ ಶ್ರೀಲಂಕಾಗೆ 3.8 ಶತಕೋಟಿ ಡಾಲರ್ ನೆರವು ನೀಡಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News