×
Ad

2018-19ರಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಜಿಡಿಪಿಯ ಶೇ.1.28ಕ್ಕೆ ಕುಸಿತ

Update: 2022-09-13 20:51 IST

ಹೊಸದಿಲ್ಲಿ,ಸೆ.13: ಸರಕಾರವು ಆರೋಗ್ಯ ಕ್ಷೇತ್ರಕ್ಕಾಗಿ ಮಾಡಿರುವ ವೆಚ್ಚವು 2017-18ರಲ್ಲಿ ಜಿಡಿಪಿಯ ಶೇ.1.35ರಿಂದ 2018-19ರಲ್ಲಿ ಜಿಡಿಪಿಯ ಶೇ.1.28ಕ್ಕೆ ಕುಸಿದಿದೆ ಎಂದು ರಾಷ್ಟ್ರೀಯ ಆರೋಗ್ಯ ಅಂದಾಜುಗಳ ಅಂಕಿಅಂಶಗಳು ತೋರಿಸಿವೆ. 2018-19ರಲ್ಲಿ ಭಾರತದ ನೈಜ ಜಿಡಿಪಿಯು 139.75 ಲ.ಕೋ.ರೂ.ಗಳಷ್ಟಿದ್ದು,ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.6.1ರಷ್ಟು ಬೆಳವಣಿಗೆಯಾಗಿದೆ.

ಈ ನಡುವೆ ಆರೋಗ್ಯ ರಕ್ಷಣೆಗಾಗಿ ‘ಔಟ್-ಆಫ್-ಪಾಕೆಟ್ ’ ಅಥವಾ ರೋಗಿಯು ಸ್ವಂತ ಹಣದಿಂದ ಮಾಡುವ ವೆಚ್ಚವು ಸಹ 2017-18ರಲ್ಲಿ ಜಿಡಿಪಿಯ ಶೇ.1.62ರಿಂದ 2018-19ರಲ್ಲಿ ಜಿಡಿಪಿಯ ಶೇ.1.52ಕ್ಕೆ ಇಳಿದಿದೆ. ಆರೋಗ್ಯ ಸೇವೆಗಳ ಸಂಪೂರ್ಣ ವೆಚ್ಚವು ವಿಮೆ ರಕ್ಷಣೆಯ ವ್ಯಾಪ್ತಿಯನ್ನು ಮೀರಿದಾಗ ಉಳಿದ ವೆಚ್ಚವನ್ನು ರೋಗಿಯು ನೇರವಾಗಿ ಭರಿಸಬೇಕಾಗುತ್ತದೆ. ಇದನ್ನು ‘ಔಟ್-ಆಫ್-ಪಾಕೆಟ್ ಪೇಮೆಂಟ್’ಎಂದು ಕರೆಯಲಾಗುತ್ತದೆ.

2025ರ ವೇಳೆಗೆ ಆರೋಗ್ಯ ಕ್ಷೇತ್ರಕ್ಕಾಗಿ ಸರಕಾರದ ವೆಚ್ಚವು ಜಿಡಿಪಿಯ ಶೇ.2.5ರಷ್ಟಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ನೀತಿ,2017 ಹೇಳುತ್ತದೆ.

ಆರೋಗ್ಯ ಕ್ಷೇತ್ರಕ್ಕಾಗಿ ಸರಕಾರದ ತಲಾವಾರು ವೆಚ್ಚವು 2017-18ರಲ್ಲಿದ್ದ 1,753 ರೂ.ಗಳಿಂದ 2018-19ರಲ್ಲಿ 1,815 ರೂ.ಗೇರಿದೆ. ತಲಾವಾರು ಔಟ್-ಆಫ್-ಪಾಕೆಟ್ ವೆಚ್ಚವೂ 2017-18ರಲ್ಲಿದ್ದ 2,097 ರೂ.ಗಳಿಂದ 2018-19ರಲ್ಲಿ 2,155 ರೂ.ಗೇರಿದೆ.

2004-05ರಲ್ಲಿ ಒಟ್ಟು ಆರೋಗ್ಯ ವೆಚ್ಚದ ಶೇ.69.64ರಷ್ಟಿದ್ದ ಔಟ್-ಆಫ್-ಪಾಕೆಟ್ ವೆಚ್ಚವು 2018-19ರಲ್ಲಿ ಶೇ.48.2ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ. ಇನ್ನೊಂದೆಡೆ,ಆರೋಗ್ಯ ಕ್ಷೇತ್ರಕ್ಕಾಗಿ ಸರಕಾರದ ವೆಚ್ಚವು 2004-05ರಲ್ಲಿಯ ಶೇ.22.5ರಿಂದ 2018-19ರಲ್ಲಿ ಶೇ.40.6ಕ್ಕೇರಿದೆ.

ಒಟ್ಟು ಆರೋಗ್ಯ ವೆಚ್ಚವು ಸರಕಾರಗಳು,ನಾಗರಿಕರು,ವಿಮೆ ಕಂಪನಿಗಳು ಮತ್ತು ದಾನಿಗಳು ಮಾಡುವ ವೆಚ್ಚಗಳನ್ನು ಒಳಗೊಂಡಿದೆ. 2004-05ರಲ್ಲಿ ಶೇ.4.2ರಷ್ಟಿದ್ದ ಒಟ್ಟು ಆರೋಗ್ಯ ವೆಚ್ಚವು 2018-19ರಲ್ಲಿ ಶೇ.3.2ಕ್ಕೆ ಇಳಿಕೆಯಾಗಿದೆ ಎನ್ನುವುದನ್ನೂ ಅಂಕಿಅಂಶಗಳು ತೋರಿಸಿವೆ.

ರಾಜ್ಯವಾರು ಅಂಕಿಅಂಶಗಳು

2018-19ರಲ್ಲಿ ಅರುಣಾಚಲ ಪ್ರದೇಶ ಸರಕಾರವು ತನ್ನ ಒಟ್ಟು ಜಿಡಿಪಿಯ ಅತ್ಯಧಿಕ ಶೇಕಡಾವಾರು (ಶೇ.4.5) ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಮಾಡಿದೆ ಎಂದು ರಾಷ್ಟ್ರೀಯ ಆರೋಗ್ಯ ಅಂದಾಜುಗಳು ತೋರಿಸಿವೆ. ಕರ್ನಾಟಕ,ಹರ್ಯಾಣ,ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿ ಈ ಮೊತ್ತವು ಅತ್ಯಂತ ಕಡಿಮೆ (ಜಿಡಿಪಿಯ ಶೇ.0.7) ಆಗಿದೆ.

ಒಟ್ಟು ತಲಾವಾರು ಆರೋಗ್ಯ ವೆಚ್ಚವು ಕೇರಳದಲ್ಲಿ ಅತ್ಯಧಿಕ (9,871 ರೂ.) ಆಗಿದ್ದರೆ ಬಿಹಾರದಲ್ಲಿ ಕನಿಷ್ಠ (1,517 ರೂ.)ವಾಗಿದೆ. 2018-19ರಲ್ಲಿ ಕೇರಳದಲ್ಲಿ ತಲಾವಾರು ಔಟ್-ಆಫ್-ಪಾಕೆಟ್ ವೆಚ್ಚವು 6,772 ರೂ.ಆಗಿದ್ದರೆ ಬಿಹಾರದಲ್ಲಿ 811 ರೂ.ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News