×
Ad

ಬಿಸಿಯೂಟದ ಮಹಿಳೆಯರ 2 ತಿಂಗಳ ಸಂಭಾವನೆ ಬಿಡುಗಡೆ; ಜೂನ್, ಜುಲೈ ತಿಂಗಳ ಸಂಭಾವನೆ ನೀಡಿ ಸರಕಾರಿ ಆದೇಶ

Update: 2022-09-13 22:27 IST

ಕುಂದಾಪುರ, ಸೆ.13: ಅಡುಗೆ ತಯಾರಿಸಿ ಶಾಲಾ ಮಕ್ಕಳಿಗೆ ಊಟ ಬಡಿಸುವ ಬಡ ಅಕ್ಷರ ದಾಸೋಹ ನೌಕರರಿಗೆ ಜೂನ್ ಹಾಗೂ ಜುಲೈ ತಿಂಗಳಿನ ಸಂಭಾವನೆ ನೀಡಿ ಸರಕಾರ ಆದೇಶಿಸಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಒಂದು ತಿಂಗಳ ಸಂಭಾವನೆ ಮಹಿಳೆಯರ ಬ್ಯಾಂಕ್ ಖಾತೆಗೆ ಖಜಾನೆಯಿಂದ ಪಾವತಿಯಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಕ್ಷರ ದಾಸೋಹ ನೌಕರರಿಗೆ 5 ತಿಂಗಳಿನಿಂದ ಸಂಭಾವನೆ ಸಿಗದ ಬಗ್ಗೆ ʼವಾರ್ತಾಭಾರತಿʼ ವಿವರವಾಗಿ ವರದಿ ಮಾಡಿತ್ತು.

ರಾಜ್ಯದಲ್ಲಿ 1,15,000ಕ್ಕೂ ಅಧಿಕ ಮಹಿಳೆಯರು ಬಿಸಿಯೂಟ ತಯಾರಿಕೆಯ ಕೆಲಸ ಮಾಡುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಆಧಾರದಲ್ಲಿ ಬಿಸಿಯೂಟ ತಯಾರಿಕೆಗೆ ನೌಕರರು ಇರುತ್ತಾರೆ. ಈ ಮೊದಲು ಮುಖ್ಯ ಅಡುಗೆಯವರಿಗೆ 2700 ರೂ. ಹಾಗೂ ಸಹಾಯಕ ಅಡುಗೆಯವರಿಗೆ 2600 ರೂ. ಗೌರವಧನ ನೀಡಲಾಗುತ್ತಿದ್ದು, ನೂತನ ಆದೇಶದಲ್ಲಿ 1000ರೂ. ಹೆಚ್ಚು ಮೊತ್ತ ನೀಡಲು ಆದೇಶವಾಗಿತ್ತು. ಅದರಂತೆ ಪರಿಷ್ಕೃತ ಸಂಭಾವನೆಯಲ್ಲಿ 3600 ಹಾಗೂ 3700 ಸಂಭಾವನೆಯನ್ನು ಸರ್ಕಾರದ ಖಜಾನೆ ಮೂಲಕ ಜಮಾ ಮಾಡಲು ಆದೇಶ ನೀಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಯಲ್ಲಿ ಒಂದು ತಿಂಗಳ ಸಂಭಾವನೆ ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಆಗಿದೆ. ಕೆಲವು ತಾಲೂಕುಗಳಲ್ಲಿ ಈವರೆಗೆ ಜಮಾ ಆಗದ ಬಗ್ಗೆಯೂ ಮಾಹಿತಿ ಬಂದಿದೆ.

"ಬಿಸಿಯೂಟ ತಯಾರಿಸುವ ಬಡ ಮಹಿಳಾ ನೌಕರರಿಗೆ ಎರಡು ತಿಂಗಳ ಸಂಭಾವನೆ ಬಿಡುಗಡೆ ಮಾಡಿದ ಸರಕಾರ ಅವರು ಮತ್ತವರ ಕುಟುಂಬದ ಭವಿಷ್ಯವನ್ನು ನೋಡಬೇಕಿದೆ. ಮುಂದಿನ ದಿನದಲ್ಲಿ ಇವರಿಗೆ ಕನಿಷ್ಟ ವೇತನವನ್ನು ಕೊಡುವುದು, ಕಾರ್ಮಿಕ ವಿಮಾ ಯೋಜನೆ, ಕಾರ್ಮಿಕ ಭವಿಷ್ಯನಿಧಿ, ಗ್ರಾಚ್ಯುವಿಟಿ ಸಹಿತ ಸಾಮಾಜಿಕ ಭದ್ರತೆ ನೀಡಬೇಕು. ಈ ವರ್ಷ ಎಪ್ರಿಲ್, ಮೇ ತಿಂಗಳಿನಲ್ಲಿ ಕೆಲಸ ಮಾಡಿದ್ದು ಅದರ ಸಂಭಾವನೆ ನೀಡಬೇಕು. ಬೇಡಿಕೆ ಈಡೇರದಿದ್ದಲ್ಲಿ ಹೋರಾಟ ಮುಂದುವರಿಯಲಿದೆ".

-ಜಿ.ಎ ಕೋಟೆಯಾರ್ ( ಸ್ಥಾಪಕ ಅಧ್ಯಕ್ಷರು, ದಿ ಕಾಮನ್ ಪೀಪಲ್ಸ್ ವೆಲ್ಫೇರ್ ಫೌಂಡೇಶನ್ ಮಾಹಿತಿ ಸೇವಾ ಸಮಿತಿ)

"ಸರ್ಕಾರದ ಆದೇಶದಂತೆ ಎರಡು ತಿಂಗಳ ಸಂಬಳ ಬಿಡುಗಡೆಯಾಗಿದ್ದು, ಖಜಾನೆ ಮೂಲಕ ಪರಿಷ್ಕೃತ ಸಂಭಾವನೆ ಅಕ್ಷರ ದಾಸೋಹ ನೌಕರರ ಖಾತೆಗೆ ಜಮಾ ಆಗುವ  ಪ್ರಕ್ರಿಯೆ ನಡೆದಿದೆ".
-ಶೋಭಾ ಶೆಟ್ಟಿ (ಶಿಕ್ಷಾಣಾಧಿಕಾರಿ, ಅಕ್ಷರ ದಾಸೋಹ ಉಡುಪಿ ಜಿಲ್ಲೆ)

"ಎರಡು ತಿಂಗಳ ಸಂಭಾವನೆ ಬಿಡುಗಡೆಯಾದ ಮಾಹಿತಿ  ನಮ್ಮೆಲ್ಲರಿಗೂ ಖುಷಿ ತಂದಿದ್ದರೂ ಕೂಡ ಎಪ್ರಿಲ್, ಮೇ ತಿಂಗಳಿನಲ್ಲಿ ದುಡಿದಿದ್ದು ಪರಿಗಣಿಸಿ ಅದಕ್ಕೂ ಸಂಭಾವನೆ ನೀಡಬೇಕಿದೆ. ಅಲ್ಲದೆ ನಮಗೆ ಆರೋಗ್ಯ ಭದ್ರತೆ, ಜೀವನ ಭದ್ರತೆ ನೀಡಬೇಕು".
-ಸಿಂಗಾರಿ ಪೂಜಾರಿ (ಅಧ್ಯಕ್ಷರು, ಕುಂದಾಪುರ ತಾಲೂಕು ಅಕ್ಷರ ದಾಸೋಹ ನೌಕರರ ಸಂಘ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News