ವಿಶ್ವದ ಅತ್ಯಂತ ಎತ್ತರದ ಚಿನಾಬ್ ರೈಲು ಸೇತುವೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಭಾರತಿಯ ರೇಲ್ವೆ

Update: 2022-09-14 18:00 GMT
(Image – Indian Railways)

ಹೊಸದಿಲ್ಲಿ,ಸೆ.14: ಉಧಮಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಮಾರ್ಗದ ಭಾಗವಾಗಿರುವ ಚಿನಾಬ್ ಸೇತುವೆಯ ಕೆಲವು ಅದ್ಭುತ,ಉಸಿರುಗಟ್ಟಿಸುವ ಚಿತ್ರಗಳನ್ನು ಭಾರತೀಯ ರೇಲ್ವೆಯು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ರಿಯಾಸಿ ಜಿಲ್ಲೆಯ ಕೌರಿ ಪ್ರದೇಶದಲ್ಲಿನ ಚಿನಾಬ್ ನದಿಯ ಮೇಲೆ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆಯು ಆ.14ರಂದು ಪೂರ್ಣಗೊಳ್ಳುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತ್ತು. 272 ಕಿ.ಮೀ.ಉದ್ದದ ಯುಎಸ್‌ಬಿಆರ್‌ಎಲ್ ಯೋಜನೆಯ 161 ಕಿ.ಮೀ.ಭಾಗದಲ್ಲಿ ಕಾಮಗಾರಿಗಳನ್ನು ಹಂತಹಂತವಾಗಿ ಆರಂಭಿಸಲಾಗಿತ್ತು.118 ಕಿ.ಮೀ.ಗಳ ಕಾಜಿಗುಂದ್-ಬಾರಾಮುಲ್ಲಾ ವಿಭಾಗದ ಮೊದಲ ಹಂತವನ್ನು 2009,ಅಕ್ಟೋಬರ್‌ನಲ್ಲಿ,18 ಕಿ.ಮೀ.ಗಳ ಬನಿಹಾಲ್-ಕಾಜಿಗುಂದ್‌ನ್ನು 2013 ಜೂನ್‌ನಲ್ಲಿ ಮತ್ತು 25 ಕಿ.ಮೀ.ಗಳ ಉಧಮಪುರ-ಕತ್ರಾವನ್ನು 2014 ಜುಲೈನಲ್ಲಿ ಆರಂಭಿಸಲಾಗಿತ್ತು.

ಭಾರತೀಯ ರೈಲ್ವೆಯು ಹಂಚಿಕೊಂಡಿರುವ ಚಿತ್ರಗಳು ಮೋಡಗಳ ಸಾಗರದ ಮೇಲೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಕಮಾನನ್ನು ತೋರಿಸುತ್ತಿದೆ. ಮತ್ತೊಂದು ಚಿತ್ರವು ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಿರುವುದನ್ನು ತೋರಿಸುತ್ತಿದ್ದು,ಸೇತುವೆಯು ದಿಗಂತದತ್ತ ಸಾಗುತ್ತಿರುವಂತೆ ಕಾಣುತ್ತಿದೆ.

ಎಲ್ಲ ಚಿತ್ರಗಳು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಮುಳುಗಿರುವ ಸೇತುವೆಯ ಸ್ಫಟಿಕ ಸ್ಪಷ್ಟ ನೋಟವನ್ನು ನೀಡುತ್ತಿವೆ.

ಚಿತ್ರಗಳನ್ನು ಕಂಡು ಪುಳಕಿತರಾಗಿರುವ ಟ್ವಿಟರ್ ಬಳಕೆದಾರರು ಸೇತುವೆಯ ನಿರ್ಮಾಣಕ್ಕಾಗಿ ರೈಲ್ವೆಯನ್ನು ಅಭಿನಂದಿಸಿದ್ದಾರೆ.

1,315 ಮೀ.ಉದ್ದದ ಚಿನಾಬ್ ಸೇತುವೆಯು ಇಂಜಿನಿಯರಿಂಗ್ ಅದ್ಭುತವಾಗಿದ್ದು,ನಿರ್ಮಾಣ ತಂಡಕ್ಕೆ ದುರ್ಗಮ ಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಸೇರಿದಂತೆ ಹಲವಾರು ಸವಾಲುಗಳು ಎದುರಾಗಿದ್ದವು. ನದಿ ತಳಮಟ್ಟದಿಂದ 359 ಮೀ.ಎತ್ತರದಲ್ಲಿರುವ ಚಿನಾಬ್ ಸೇತುವೆಯು ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಲ್ಲೇಖಕ್ಕಾಗಿ,ಅದು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ 35 ಮೀ.ಹೆಚ್ಚು ಎತ್ತರವಾಗಿದೆ.

ರೈಲ್ವೆ ಸಚಿವಾಲಯವು ತಿಳಿಸಿರುವಂತೆ ಸೇತುವೆಯ ರಚನಾತ್ಮಕ ವಿವರಗಳನ್ನು ಸಿದ್ಧಪಡಿಸಲು ಅತ್ಯಾಧುನಿಕ ‘ಟೆಕ್ಲಾ’ ಸಾಫ್ಟವೇರ್‌ನ್ನು ಬಳಸಲಾಗಿತ್ತು. ಸೇತುವೆಯ ನಿರ್ಮಾಣದಲ್ಲಿ ಬಳಸಲಾಗಿರುವ ಉಕ್ಕು ಮೈನಸ್ 10 ಡಿ.ಸೆ.ನಿಂದ 40 ಡಿ.ಸೆ.ತಾಪಮಾನಕ್ಕೆ ಸೂಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News