ಬಿಹಾರ ಗಲಭೆ ಪ್ರಕರಣ: ಎಂಟು ವರ್ಷದ ಬಾಲಕನಿಗೆ ವಾರದ ಬಳಿಕ ಜಾಮೀನು

Update: 2022-09-14 18:03 GMT

ಪಾಟ್ನಾ, ಸೆ.15:  ಬಿಹಾರದಲ್ಲಿ ಧಾರ್ಮಿಕ ಮೆರವಣಿಗೆಯೊಂದರ ಸಂದರ್ಭ ನಡೆದ ಘರ್ಷಣೆಯಲ್ಲಿ ಶಾಮೀಲಾಗಿದ್ದನೆಂಬ ಆರೋಪದಲ್ಲಿ  ಬಂಧಿತನಾಗಿದ್ದ ಎಂಟು ವರ್ಷದ ಬಾಲಕನಿಗೆ ಸ್ಥಳೀಯ ನ್ಯಾಯಾಲಯವು  ಬುಧವಾರ ಜಾಮೀನು ಬಿಡುಗಡೆ ನೀಡಿದೆ.

ಸಿವಾನ್ ಜಿಲ್ಲೆಯ ಬರ್‌ಹಾರಿಯಾ ಗ್ರಾಮದ ನಿವಾಸಿಯಾದ ಈ ಬಾಲಕನಿಗೆ ಸ್ಥಳೀಯ ನ್ಯಾಯಾಲಯವು ಆತ ಬಂಧಿತನಾದ ಒಂದು ವಾರದ ಬಳಿಕ ಜಾಮೀನು ಬಿಡುಗಡೆ ನೀಡಿದೆಯೆಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 8ರಂದು ಬರ್‌ಹಾರಿಯಾ ಗ್ರಾಮದಲ್ಲಿ ಮಹಾವೀರ ಆಖಾಡದ ವಾರ್ಷಿಕ ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡು ಕೋಮುಗಳ ಸದಸ್ಯರ ನಡುವೆ ಘರ್ಷಣೆಯುಂಟಾಗಿತ್ತು. ಈ ಸಂದರ್ಭ ಪೊಲೀಸರು ಮನಬಂದಂತೆ ಮಸೀದಿಯಲ್ಲಿದ್ದವರನ್ನು ಬಂದಿಸಿದ್ದರು ಮಧ್ಯಾಹ್ನದ ಪ್ರಾರ್ಥನೆಯನ್ನು ನಡೆಸುವುದಕ್ಕಾಗಿ 70 ವರ್ಷದ ತನ್ನ ತಾತನೊಂದಿಗೆ ಮಸೀದಿಗೆ ಆಗಮಿಸಿದ್ದ ಈ ಬಾಲಕನನ್ನು ಕೂಡಾ ಪೊಲೀಸರು ಬಂಧಿಸಿದ್ದರು ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಬಾಲಕನ ಬಂಧನದ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ಗಲಭೆಕೋರರನ್ನು ಬಂಧಿಸುವ ಬದಲು ಪೊಲೀಸರು ಮುಸ್ಲಿಂ ಮಕ್ಕಳ ಮೇಲೆ ಗುರಿಯಿಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಶಿಕ್ಷೆ ನೀಡಬೇಕಾಗಿದೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಪರಿಹಾರ ದೊರೆಯಬೇಕಾಗಿದೆ’’ ಎಂದು  ಸಂಸದ ಎಐಎಂಐಎಂ ಅಸಾದುದ್ದೀನ್ ಉವೈಸ್ ಟ್ವೀಟ್ ಮಾಡಿದ್ದಾರೆ.
ಕೇಸರಿ ವಸ್ತ್ರಧರಿಸಿದ ಸಂಘಪರಿವಾರದ ಬೆಂಬಲಿಗರ   ಗುಂಪೊಂದು ಲಾಠಿಗಳು ಹಾಗೂ ಕಬ್ಬಿಣದ ಸಲಾಖೆಗಳನ್ನು ಹಿಡಿದು ಸಮೀಪದ ಮಸೀದಿಯ ಸಮೀಪ ಜಮಾಯಿಸಿ, ಕೋಮುದ್ವೇಷದ ಘೋಷಣೆಗಳನ್ನು  ಕೂಗಿದ ಸಂದರ್ಭದಲ್ಲಿ ಘರ್ಷಣೆ ಭುಗಿಲೆದ್ದಿತ್ತು ಎಂದು ಬರ್‌ಹಾರಿಯಾದ ನಿವಾಸಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News