×
Ad

ತನ್ನ ಖಾತೆಯಲ್ಲಿರುವ ಹಣ ಹಿಂಪಡೆಯಲು ಬ್ಯಾಂಕ್ ಸಿಬಂದಿಗೆ ಗನ್ ತೋರಿಸಿ ಬೆದರಿಸಿದ ಮಹಿಳೆ

Update: 2022-09-15 00:13 IST
PHOTO: REUTERS

ಬೈರೂತ್, ಸೆ.14: ಬ್ಯಾಂಕ್‌ನಲ್ಲಿ ತಾನಿಟ್ಟಿದ್ದ ಸಾವಿರಾರು ಡಾಲರ್ ಹಣವನ್ನು ಹಿಂಪಡೆಯಲು ಲೆಬನಾನ್‌ನ ಮಹಿಳೆಯೊಬ್ಬಳು ಬ್ಯಾಂಕ್ ಸಿಬಂದಿಗೆ ಗನ್ ತೋರಿಸಿ ಬೆದರಿಸಿದ ಘಟನೆ ವರದಿಯಾಗಿದೆ. ಲೆಬನಾನ್‌ನ ಬಿಎಲ್‌ಒಎಂ ಬ್ಯಾಂಕ್‌ಗೆ ಕೆಲವು ಕಾರ್ಯಕರ್ತರೊಂದಿಗೆ ಆಗಮಿಸಿದ ಸಲಿ ಹಫೀರ್ ಎಂಬ ಮಹಿಳೆ ಮ್ಯಾನೇಜರ್ ಕ್ಯಾಬಿನ್‌ನತ್ತ ನುಗ್ಗಿದ್ದಾಳೆ. ಬಳಿಕ ಬ್ಯಾಂಕ್‌ನ ಸಿಬಂದಿಗಳಿಗೆ ಗನ್ ತೋರಿಸಿ, ತನ್ನ ಖಾತೆಯಲ್ಲಿರುವ ಹಣವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನೂ ಆಕೆ ವೀಡಿಯೊ ಮೂಲಕ ನೇರ ಪ್ರಸಾರ ಮಾಡಿದ್ದಾಳೆ. ‘ನನ್ನ ಸಹೋದರಿ ಕ್ಯಾನ್ಸರ್ ರೋಗಿ. ಅವರ ಚಿಕಿತ್ಸೆಗೆ ಹಣದ ಅಗತ್ಯವಿದೆ. ನಾನು ಯಾರನ್ನೂ ಕೊಲ್ಲಲು ಬಂದಿಲ್ಲ. ನನ್ನ ಹಕ್ಕುಗಳನ್ನು ಪ್ರತಿಪಾದಿಸಲು ಬಂದಿದ್ದೇನೆ’ ಎಂದಾಕೆ ಹೇಳಿದ್ದಾಳೆ.

ಸ್ವಲ್ಪ ಸಮಯದ ಬಳಿಕ, ಲೆಬನಾನ್‌ನ ಅಲೆಯ್ ನಗರದ ಬ್ಯಾಂಕೊಂದಕ್ಕೆ ನುಗ್ಗಿದ ಸಶಸ್ತ್ರಧಾರಿ ವ್ಯಕ್ತಿಯೊಬ್ಬ ಬ್ಯಾಂಕ್‌ನ ಸಿಬಂದಿಗಳನ್ನು ಬೆದರಿಸಿ ತನ್ನ ಉಳಿತಾಯ ಖಾತೆಯ ಹಣದಲ್ಲಿ ಸ್ವಲ್ಪ ಹಣವನ್ನು ಹಿಂದಕ್ಕೆ ಪಡೆದಿದ್ದಾನೆ. ಆ ಬಳಿಕ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಲೆಬನಾನ್‌ನ ಕರೆನ್ಸಿ ತೀವ್ರ ಅಪಮೌಲ್ಯಗೊಂಡಿದ್ದು ಬ್ಯಾಂಕ್‌ನಲ್ಲಿರುವ ತಮ್ಮ ಉಳಿತಾಯ ಹಣವನ್ನು ಹಿಂಪಡೆಯಲೂ ಅಲ್ಲಿನ ಜನತೆಗೆ ಸಮಸ್ಯೆಯಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News