×
Ad

ಉತ್ತರ ಪ್ರದೇಶ: ದಲಿತ ಸಹೋದರಿಯರ ಅತ್ಯಾಚಾರ-ಹತ್ಯೆ; ಆರು ಮಂದಿ ಆರೋಪಿಗಳ ಬಂಧನ

Update: 2022-09-15 10:04 IST

ಲಕ್ನೊ: ಉತ್ತರ ಪ್ರದೇಶದ ಲಖಿಂಪುರದಲ್ಲಿ 17 ಹಾಗೂ  15ರ ಹರೆಯದ ಇಬ್ಬರು ದಲಿತ ಸಹೋದರಿಯರು ಬುಧವಾರ ಕಬ್ಬಿನ ಗದ್ದೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದೆ. ಸಹೋದರಿಯರ ತಾಯಿಯ ದೂರಿನ ಮೇರೆಗೆ ಆರು ಮಂದಿಯನ್ನು ಅತ್ಯಾಚಾರ ಹಾಗೂ  ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಶವವಾಗಿ ಪತ್ತೆಯಾಗುವ ಮೂರು ಗಂಟೆಗಳ ಮೊದಲು ಮಕ್ಕಳಿಬ್ಬರನ್ನು ಅಪಹರಿಸಲಾಗಿತ್ತು ಎಂದು ಬಾಲಕಿಯರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಯುವಕರು ತನ್ನ ಹೆಣ್ಣು ಮಕ್ಕಳನ್ನು ಬೈಕ್ ಗಳಲ್ಲಿ   ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಒಬ್ಬನ ಹೆಸರು ಹಾಗೂ  ಮೂವರು ಅಪರಿಚಿತ ಆರೋಪಿಗಳನ್ನು ಉಲ್ಲೇಖಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.

ಈ ಘಟನೆಯು 2014 ರಲ್ಲಿ ಬದೌನ್‌ನಲ್ಲಿ ನಡೆದ ಭಯಾನಕ ಘಟನೆಯನ್ನು ನೆನಪಿಸಿದೆ. ಆಗ  ಇಬ್ಬರು ಸೋದರಸಂಬಂಧಿಗಳ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು.

ಆದಿತ್ಯನಾಥ್ ಸರಕಾರದ ಕಾನೂನು,ಸುವ್ಯವಸ್ಥೆ ಕುರಿತು ಪ್ರತಿಪಕ್ಷಗಳ ವಾಗ್ದಾಳಿ

ಬಾಲಕಿಯರ ಸಾವಿನ ಘಟನೆಯಿಂದ ಕೆರಳಿರುವ ಪ್ರತಿಪಕ್ಷಗಳು   ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಆದಿತ್ಯನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಆದಿತ್ಯನಾಥ್ ಸರಕಾರದಲ್ಲಿ ಗೂಂಡಾಗಳು ಪ್ರತಿದಿನ ತಾಯಿ ಹಾಗೂ  ಸಹೋದರಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಸರಕಾರ ಈ ಪ್ರಕರಣದ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.

ಪ್ರತಿಭಟನೆಯ ಚಿತ್ರಗಳನ್ನು ಟ್ವೀಟ್ ಮಾಡಿರುವ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ “ನಿಘಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ದಲಿತ ಸಹೋದರಿಯರನ್ನು ಅಪಹರಿಸಿದ ನಂತರ ಹತ್ಯೆ ಮಾಡಲಾಗಿದೆ. ಕುಟುಂಬದ ಒಪ್ಪಿಗೆಯಿಲ್ಲದೆ ಪೊಲೀಸರು ‘ಪಂಚನಾಮ’ ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಬಾಲಕಿಯರ ತಂದೆ ಪೊಲೀಸರ ಮೇಲೆ ಮಾಡಿರುವ  ಆರೋಪ ಬಹಳ ಗಂಭೀರವಾಗಿದೆ. ಲಖಿಂಪುರದಲ್ಲಿ ರೈತರ ಹತ್ಯೆಯ ನಂತರ, ದಲಿತರ ಹತ್ಯೆಯು ಈಗ ‘ಹತ್ರಾಸ್’ ಪುತ್ರಿಯ ಹತ್ಯೆಯ ಪುನರಾವರ್ತನೆಯಾಗಿದೆ’’ ಎಂದು  ಟ್ವೀಟಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳಿಗೆ "ಯಾವುದೇ ಭಯವಿಲ್ಲ" ಏಕೆಂದರೆ ಸರಕಾರದ "ಆದ್ಯತೆಗಳು ತಪ್ಪಾಗಿವೆ" ಎಂದು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ಲಖಿಂಪುರದಲ್ಲಿ (ಯುಪಿ) ಇಬ್ಬರು ಸಹೋದರಿಯರ ಹತ್ಯೆಯ ಘಟನೆ ಹೃದಯ ವಿದ್ರಾವಕವಾಗಿದೆ. ಆ ಹೆಣ್ಣುಮಕ್ಕಳನ್ನು ಹಗಲು ಹೊತ್ತಿನಲ್ಲಿ ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ. ಪ್ರತಿದಿನ ಪತ್ರಿಕೆಗಳು ಹಾಗೂ ಟಿವಿಗಳಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಅಷ್ಟಕ್ಕೂ ಯುಪಿಯಲ್ಲಿ ಮಹಿಳೆಯರ ವಿರುದ್ಧ ಘೋರ ಅಪರಾಧಗಳು ಏಕೆ ಹೆಚ್ಚುತ್ತಿವೆ?'' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News