ಕೇರಳ: ಹುಟ್ಟೂರಿನಲ್ಲಿ ನೆರವೇರಿದ ಮಿನ್ಸಾ ಮರಿಯಂ ಅಂತ್ಯಸಂಸ್ಕಾರ

Update: 2022-09-15 12:39 GMT
ಮಿನ್ಸಾ ಮರಿಯಂ ಜೇಕಬ್ (Photo: gulf-times.com)

ತಿರುವನಂತಪುರಂ: ಕತರ್(Qatar) ನಲ್ಲಿ ಕಳೆದ ರವಿವಾರ ಶಾಲಾ ಬಸ್ಸಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಾಲ್ಕು ವರ್ಷದ ಮಿನ್ಸಾ ಮರಿಯಂ ಜೇಕಬ್(Minsa Mariam Jacob) ಎಂಬ ಬಾಲಕಿಯ ಅಂತ್ಯಸಂಸ್ಕಾರ ಆಕೆಯ ಹುಟ್ಟೂರಾದ ಕೇರಳದ(Kerala) ಕೊಟ್ಟಾಯಂ ಜಿಲ್ಲೆಯ ಪನ್ನಿಮತ್ರಂ ಎಂಬಲ್ಲಿ ಬುಧವಾರ ನೆರವೇರಿದೆ.

ಕೇರಳ ಮೂಲದ ಅಭಿಲಾಷ್ ಚಾಕೋ-ಸೌಮ್ಯಾ ದಂಪತಿಯ ಎರಡನೇ ಪುತ್ರಿಯಾಗಿದ್ದ ಮಿನ್ಸಾ ಕತರ್ ನ ವಕ್ರಾ ಎಂಬಲ್ಲಿನ ಕಿಂಡರ್‍ಗಾರ್ಟನ್ ವಿದ್ಯಾರ್ಥಿನಿಯಾಗಿದ್ದಳು. ರವಿವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳಿದ್ದ ಆಕೆ ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಆಕೆ ವಾಹನದೊಳಗೆ ಅಧಿಕ ಉಷ್ಣತೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.

ಅಪರಾಹ್ನ ಶಾಲೆ ಮುಗಿದು ಮಕ್ಕಳೆಲ್ಲಾ ಬಸ್ ಹತ್ತಿದಾಗ ಅಲ್ಲಿ ಮಿನ್ಸಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಬದುಕುಳಿಸಲಾಗಿರಲಿಲ್ಲ. ಆ ದಿನ ಕತರ್ ನಾದ್ಯಂತ ತಾಪಮಾನ 36 ಡಿಗ್ರಿಯಿಂದ 43 ಡೆಗ್ರಿ ಸೆಲ್ಸಿಯಸ್‍ನಷ್ಟಿತ್ತು.

ಬಾಲಕಿಯ ಸಾವಿಗೆ ಸಂತಾಪ ಸೂಚಿಸಿದ್ದ ಕತರ್ ಶಿಕ್ಷಣ ಸಚಿವಾಲಯ ಘಟನೆಯ ತನಿಖೆ ನಡೆಸಲಾಗುವುದೆಂದು ಹೇಳಿತ್ತು. ನಿರ್ಲಕ್ಷ್ಯಕ್ಕಾಗಿ ಶಾಲೆಯನ್ನು ಮುಚ್ಚಲಾಗಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ.

ಬುಧವಾರ ಮಿನ್ಸಾಳ ಮೃತದೇಹ ಕತರ್ ನಿಂದ ನೆಡುಂಬಸ್ಸೇರಿಗೆ ಆಗಮಿಸಿ ಅಲ್ಲಿಂದ ಪನ್ನಿಮತ್ರಂಗೆ ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಯಿತು. ಆಕೆಯ ದಫನವನ್ನು ಕುಟುಂಬದ ಮನೆಯ ಆವರಣದಲ್ಲಿ ಕುಟುಂಬದ ಇಚ್ಛೆಯಂತೆಯೇ ನೆರವೇರಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಇದನ್ನೂ ಓದಿ: ಮೇಲ್ಜಾತಿಯವರಿಗೆ ಇರಿಸಲಾಗಿದ್ದ ಮಡಕೆಯ ನೀರು ಕುಡಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News