ಶಿವಪುರದಲ್ಲಿ ಗುಡ್ಡ ಕುಸಿತ; ಅಪಾಯದ ಅಂಚಿನಲ್ಲಿ ಮೊಬೈಲ್ ಟವರ್

Update: 2022-09-15 15:11 GMT

ಹೆಬ್ರಿ, ಸೆ.15: ಉಡುಪಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ಎ ಬದಿ ಇರುವ ಶಿವಪುರ ಮೇಲ್ಪೇಟೆ ಮೀನು ಮಾರ್ಕೆಟ್ ಬಳಿಯ ಖಾಸಗಿ ಕಂಪೆನಿಗಳ ನೆಟ್‌ವರ್ಕ್ ಟವರ್‌ನ ಸುತ್ತಲಿನ ಗುಡ್ಡ ಕುಸಿದಿದೆ. ಇದರಿಂದ ಟವರ್ ಅಪಾಯದ ಅಂಚಿನಲ್ಲಿದ್ದು, ಧರೆಗೆ ಉರುಳುವ ಭೀತಿಯಲ್ಲಿದೆ.

ರಸ್ತೆ ಬದಿಯ ಈ ಗುಡ್ಡದ ಮಣ್ಣುನ್ನು ತೆಗೆದ ಪರಿಣಾಮ ಟವರ್ ಅಂಚಿಗೆ ಬಂದಿದೆ. ಈ ಬಾರಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಗುಡ್ಡದ ಮಣ್ಣು ಕುಸಿದಿದ್ದು ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿ ಮಣ್ಣು ಕುಸಿದರೆ ಭಾರೀ ಗಾತ್ರದ ಟವರ್ ಕೂಡ ರಸ್ತೆಗೆ ಬೀಳುವ ಅಪಾಯವಿದೆ.

ಈ ಪರಿಸರದಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಒಡಾಡುತ್ತಿದ್ದು, ಸಮೀಪದಲ್ಲಿಯೇ ಹಲವು ಮನೆಗಳು ಅಂಗಡಿ ಮುಂಗಟ್ಟು ಗಳಿವೆ. ಇದರಿಂದ ಸ್ಥಳೀಯ ಗ್ರಾಮಸ್ಥರು ಈ ಟವರ್ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಟವರ್ ಅಡಿಯಲ್ಲಿ ರಸ್ತೆ ಬದಿ ಹಾದು ಹೋಗಿರುವ ಟ್ರಾನ್ಸ್ ಫಾರ್ಮರ್‌ಗಳಿದ್ದು ಒಂದು ವೇಳೆ ಟವರ್ ಅದರ ಮೇಲೆ ಬಿದ್ದಲ್ಲಿ ಸ್ಪೋಟ ಗೊಂಡು ಭಾರಿ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣ ತೆರವಿಗೆ ಒತ್ತಾಯ: ಖಾಸಗಿ ಜಾಗದಲ್ಲಿರುವ ಈ ಟವರ್‌ನ್ನು  15 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಇದೀಗ ಗುತ್ತಿಗೆ ಅವಧಿಯು ಪೂರ್ಣಗೊಂಡಿದ್ದು, ಅಪಾಯದ ಹಿನ್ನೆಲೆಯಲ್ಲಿ ಜಾಗದ ಮಾಲಕರು ಗುತ್ತಿಗೆ ಮುಂದುವರಿಸಲು ಒಪ್ಪದೆ ಕೂಡಲೇ ತರೆವುಗೊಳಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇದಕ್ಕೆ ಸಂಬಂಧಪಟ್ಟ ಕಂಪೆನಿಯವರು ಈವರೆಗೆ ಸ್ಪಂದಿಸದೆ, ಟವರ್ ತರೆವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ದೂರಲಾಗಿದೆ. ಕಂಪೆನಿಯು ಜನರ ಪ್ರಾಣದ ಜತೆ ಚಲ್ಲಾಡವಾಡುತ್ತಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಅಪಾಯಕಾರಿ ಟವರ್ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೂ ತರಲಾಗಿದೆ. ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಅಪಾಯದ ತೀವ್ರತೆಯನ್ನು ಪರಿಶೀಲಿಸಿ ಟವರ್‌ನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News