ಸೆ.17ರಿಂದ ಬಿಜೆಪಿಯಿಂದ ‘ಸೇವಾ ಪಾಕ್ಷಿಕ’ ಅಭಿಯಾನ

Update: 2022-09-15 16:02 GMT

ಉಡುಪಿ, ಸೆ.15: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆಯಂತೆ ರಾಜ್ಯ ಬಿಜೆಪಿಯ ಮಾರ್ಗದರ್ಶನದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ  ಕುಯಿಲಾಡಿ ಸುರೇಶ್ ನಾಯಕ್‌ರ ನೇತೃತ್ವದಲ್ಲಿ ಇದೇ ಸೆ.17ರಿಂದ ಅ.2ರವರೆಗೆ  ಜಿಲ್ಲೆಯಾದ್ಯಂತ ವಿಶಿಷ್ಟ ಸೇವಾ ಚಟುವಟಿಕೆಗಳೊಂದಿಗೆ ‘ಸೇವಾ ಪಾಕ್ಷಿಕ’ ಅಭಿಯಾನವನ್ನು ಜಿಲ್ಲಾ ಬಿಜೆಪಿ ಆಚರಿಸಲಿದೆ ಎಂದು ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಗುರುವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 15 ದಿನಗಳ ಸೇವಾ ಪಾಕ್ಷಿಕದ ಅವಧಿಯಲ್ಲಿ  ಜಿಲ್ಲೆಯಾದ್ಯಂತ 13 ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನ ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ನಡೆಯಲಿದೆ ಎಂದವರು ತಿಳಿಸಿದರು.

ನ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದ್ದು, ಈ  ಸಂದರ್ಭದಲ್ಲಿ ಎರಡು ದಿನ ಉಡುಪಿ ಜಿಲ್ಲೆಯ ಒಟ್ಟು 100 ಕಡೆಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುವುದು. ಸೆ.25 ಪಂಡಿತ್ ದೀನದಯಾಳ್ ಉಪಾಧ್ಯಾಯ, ಅ.2ರಂದು ಮಹಾತ್ಮಗಾಂಧಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರ ಇವರ ಜನ್ಮದಿನವಾಗಿದ್ದು ಈ ದಿನಗಳಂದೂ ವಿಶೇಷ ಸೇವಾ ಚಟುವಟಿಕೆಗಳು ನಡೆಯಲಿದೆ ಎಂದವರು ವಿವರಿಸಿದರು.

ಸೆ.17ರಿಂದ ಅ.2ರವರೆಗೆ  ಜೀವರಕ್ಷಕ ಲಸಿಕಾ ಅಭಿಯಾನ ನಡೆದರೆ, ಸೆ.20-21ರಂದು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಪ್ರದರ್ಶನ ಹಾಗೂ ಬೀದಿ ನೃತ್ಯ ಕಾರ್ಯಕ್ರಮ ಗಳು ನಡೆಯಲಿವೆ. ಸೆ.21-22ರಂದು ಆರೋಗ್ಯ ತಪಾಸಣಾ ಶಿಬಿರಗಳು, 22-23ರಂದು ಜಿಲ್ಲೆಯಲ್ಲಿ ಒಟ್ಟು 1000 ಅರಳಿ ಮರ (ಅಶ್ವಥ ಮರ) ನೆಡುವ ಅಭಿಯಾನ, ಸೆ.24-25ರಂದು ಕಮಲೋತ್ಸವ, 25ರಿಂದ 29ರವರೆಗೆ ಫಲಾನುಭವಿಗಳ ಸಭೆ ಹಾಗೂ ನೊಂದಣಿ ಅಭಿಯಾನ ನಡೆಯಲಿದೆ.

ಸೆ.26-27ರಂದು ಜಿಲ್ಲೆಯಲ್ಲಿ 75 ಕೆರೆಗಳ ಪುನರುಜ್ಜೀವನ, ದುರಸ್ತಿ, ನಿರ್ಮಾಣ ಅಭಿಯಾನ, 28-29ರಂದು ಅಂಗನವಾಡಿ ಸೇವಾ ದಿವಸ್, ಸೆ.30ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ, ಸೆ.30ರಂದು ಕ್ಷಯರೋಗ ನಿರ್ಮೂಲನಾ ಅಭಿಯಾನ, ಅ.2ರಂದು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ, ಖಾದಿ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಘವೇಂದ್ರ ಕಿಣಿ ತಿಳಿಸಿದರು.

ಇದಕ್ಕಾಗಿ ‘ಸೇವಾ ಪಾಕ್ಷಿಕ’ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಸಹ ಸಂಚಾಲಕರಾಗಿ ಸದಾನಂದ ಉಪ್ಪಿನಕುದ್ರು ಮತ್ತು ಶಿವಕುಮಾರ್ ಅಂಬಲಪಾಡಿ ನೇಮಕಗೊಂಡಿದ್ದಾರೆ.  ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರು ಮತ್ತು ಅಭಿಯಾನದ 13 ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಸಹ ನೇಮಿಸಲಾಗಿದೆ. ಈ ತಂಡಗಳು ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದವರೆಗೆ ನಡೆಯಲಿರುವ ’ಸೇವಾ ಪಾಕ್ಷಿಕ’ ಅಭಿಯಾನವನ್ನು ಸುವ್ಯವಸ್ಥಿತ ವಾಗಿ ಆಯೋಜಿಸಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗೂ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News