ಉಡುಪಿ; ಗಾಯಾಳು ಏರ್‌ಲಿಫ್ಟ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್‌ ಖಾತೆ ಸ್ತಂಭನ

Update: 2022-09-15 16:37 GMT

ಉಡುಪಿ, ಸೆ.15: ಅಪಘಾತದ ಗಾಯಾಳನ್ನು ಏರ್‌ಲಿಫ್ಟ್ ಮಾಡಬೇಕು ಎಂಬುದಾಗಿ ಹೇಳಿ ಮಂದಾರ್ತಿ ಮೂಲದ ಉದ್ಯಮಿಯಿಂದ 3 ಲಕ್ಷ ರೂ. ಆನ್‌ಲೈನ್ ಮೂಲಕ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಖಾತೆಯನ್ನು ಪತ್ತೆ ಹಚ್ಚಿದ ಉಡುಪಿ ಪೊಲೀಸರು ಖಾತೆಯನ್ನು ಸ್ತಂಭನಗೊಳಿಸಿದ್ದಾರೆ.

ಸೆ.4ರಂದು ಅನಾಮಧೇಯ ವ್ಯಕ್ತಿಯೊಬ್ಬ ಯುರೋ ಬಾಂಡ್ ಕಂಪನಿಯ ಮಾಲಕನೆಂದು ಮಂದಾರ್ತಿಯ ಉದ್ಯಮಿಯೊಬ್ಬರಿಗೆ ಕರೆ ಮಾಡಿ, ತನ್ನ ಮಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ತುರ್ತಾಗಿ 3 ಲಕ್ಷ ರೂ. ಹಣವನ್ನು ಖಾತೆಗೆ ಕಳುಹಿಸಿ ಕೊಡುವಂತೆ ವಿನಂತಿಸಿದ್ದನು. ಇದಕ್ಕೆ ಸ್ಪಂದಿಸಿದ ಉದ್ಯಮಿ ತನ್ನ ಹಾಗೂ ಸ್ನೇಹಿತರ ಖಾತೆಯಿಂದ ಒಟ್ಟು 3 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಹಾಕಿದ್ದರು. ನಂತರ ಯುರೋ ಬಾಂಡ್ ಕಂಪನಿಗೆ ಸಂಪರ್ಕಿಸಿ ಮಾಹಿತಿ ಪಡೆದಾಗ ಉದ್ಯಮಿ ಮೋಸ ಹೋಗಿರುವುದು ತಿಳಿದುಬಂತು. ಕೂಡಲೇ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಉದ್ಯಮಿಗೆ ವಂಚನೆ ಎಸಗಿದ ಆರೋಪಿ ಪತ್ತೆ ಹಚ್ಚಿದರು. ಆತ ಗುಜರಾತ್ ರಾಜ್ಯದ ಸೂರತ್ ಪ್ರದೇಶದನಾಗಿದ್ದು, ಅವನು ಮಹಾರಾಷ್ಟ್ರ ಥಾಣೆ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತಿಳಿದುಬಂತು.

ಉದ್ಯಮಿ ಗೋಲ್ಡನ್ ಸಮಯದ ಒಳಗಡೆ ದೂರು ನೀಡಿದ್ದರಿಂದ ಈ ಖಾತೆಗಳನ್ನು ಸ್ತಂಭನಗೊಳಿಸಿ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಆದ ಬಗ್ಗೆ ಮಾಹಿತಿ ಪಡೆದು, ಎಲ್ಲಾ ಹಣವನ್ನು ಹೋಲ್ಡ್ ಮಾಡಿಸಲು ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೆ ತಿಳಿಸಿದ್ದಾರೆ.

ಯಾರಾದರೂ ಆನ್‌ಲೈನ್ ಮೂಲಕ ಹಣದ ವಂಚನೆಗೆ ಒಳಗಾದರೆ ಕೇಂದ್ರ ಸರಕಾರದಿಂದ ಸಹಾಯಕ್ಕಾಗಿ ಇರುವ ನ್ಯಾಶನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ವೆಬ್‌ಸೈಟ್‌ಗೆ ಕೂಡಲೇ ಮಾಹಿತಿ ನೀಡಬೇಕು. ಆ ಕೂಡಲೇ ಗ್ರಾಹಕರ ಖಾತೆ ಹಾಗೂ ಹಣ ವರ್ಗಾವಣೆಗೊಂಡ ಖಾತೆ ಎರಡೂ ಫ್ರೀಝ್ ಆಗುತ್ತದೆ. ಇದರಿಂದ ಹಣ ವರ್ಗಾವಣೆ ಆಗುವುದಿಲ್ಲ. ಇದನ್ನು ಗೋಲ್ಡನ್ ಸಮಯ ಎಂದು ಕರೆಯುತ್ತಾರೆ,. ಈ ಬಗ್ಗೆ ಯಾವುದೇ ಮಾಹಿತಿ ಬೇಕಾಗಿದ್ದರೂ ಉಡುಪಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಗೆ ಕರೆ ಮಾಡಿ (0820-25350021, 9480805410) ಮಾಹಿತಿ ಪಡೆಯಬಹುದು ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News