ಉ.ಕ. ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಭಗ್ನ; ಕ್ರಿಮ್ಸ್ ಪ್ರಸ್ತಾವಕ್ಕೆ ಒಪ್ಪಿಗೆ ನೀಡದ ಆರ್ಥಿಕ ಇಲಾಖೆ

Update: 2022-09-15 18:03 GMT
ಸಾಂದರ್ಭಿಕ ಚಿತ್ರ

ಕಾರವಾರ, ಸೆ.15: ಉತ್ತರ ಕನ್ನಡ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಮತ್ತೆ ಭಗ್ನವಾಗಿದ್ದು, ಆಸ್ಪತ್ರೆಯ ಮಂಜೂರಾತಿಗೆ ಕ್ರಿಮ್ಸ್ ಸಲ್ಲಿಸಿದ್ದ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ.

ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಸ್ಥಳ, ಸಿಬ್ಬಂದಿ, ಉಪಕರಣ ಮೊದಲಾದ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಹಣಕಾಸಿನ ವಿವರಗಳ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು. ಬಳಿಕ ಸರಕಾರವು ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಸಲ್ಲಿಕೆ ಮಾಡಿತ್ತು. ಆದರೆ, ಆರ್ಥಿಕ ಇಲಾಖೆಯು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಗುರುವಾರ ನಡೆದ ಅಧಿವೇಶನದಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡುವ ಮೂಲಕ ಜಿಲ್ಲೆಯ ಬಹುವರ್ಷದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ನುಚ್ಚು ನೂರಾದಂತಾಗಿದೆ.

ಈ ಬಗ್ಗೆ ಮಾತನಾಡಿದ ಡಾ.ಸುಧಾಕರ, ಆಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ ಮತ್ತೊಮ್ಮೆ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿ ಕ್ರಮ ವಹಿಸಲಾಗುವುದು. ಇದಕ್ಕೆ ಸಹಮತ ಬಂದಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಆದರೆ, ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾಗಿದ್ದು, ಗುಡ್ಡಗಾಡು ಪ್ರದೇಶವನ್ನೇ ಹೆಚ್ಚು ಹೊಂದಿರುವ ಉತ್ತರ ಕನ್ನಡದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ರಕ್ಷಣೆಗೆ ಒಂದೂ ಸುಸಜ್ಜಿತ ಆಸ್ಪತ್ರೆ ಇಲ್ಲ. ಹಲವಾರು ವರ್ಷಗಳಿಂದಲೇ ಈ ಬಗ್ಗೆ ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದರೂ ಸರಕಾರ ಮಾತ್ರ ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂದು ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸುಸಜ್ಜಿತ ಆಸ್ಪತ್ರೆಗಾಗಿ ಟ್ವಿಟರ್ ಅಭಿಯಾನ, ಪ್ರಧಾನಿಗೆ ರಕ್ತದಲ್ಲಿ ಪತ್ರ, ಅಲ್ಲದೆ ರಾಜ್ಯ ರಾಜಧಾನಿಯಲ್ಲಿಯೂ ಹೋರಾಟ ನಡೆಸಲಾಗಿತ್ತು. ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲೂ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಭಿತ್ರಿಪತ್ರಗಳನ್ನು ಪ್ರದರ್ಶಿಸಿ ಹಲವರು ಒತ್ತಾಯಿಸಿದ್ದರು. ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ಮನಗಂಡ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸಿಎಂ ಗಮನಕ್ಕೆ ವಿಷಯವನ್ನು ತಂದಿದ್ದರು. ಈ ವೇಳೆ ಆಸ್ಪತ್ರೆ ಮಂಜೂರಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಿಂಗಳೊಳಗಾಗಿ ಬಂದು ಘೋಷಣೆ ಮಾಡಲಿದ್ದಾರೆ ಎಂದೂ ಭರವಸೆ ನೀಡಿದ್ದರು. ಆ ಬಳಿಕ ಸಿಎಂ ಬೊಮ್ಮಾಯಿ ಅವರೂ ಶೀಘ್ರ ಕ್ರಮವಹಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಆರ್ಥಿಕ ಇಲಾಖೆ ಕಡವನ್ನೇ ನಿರಾಕರಣೆ ಮಾಡಿದೆ. ಹೋರಾಟದ ಸಮಯದಲ್ಲಿ ಮಾತ್ರ ಸುಳ್ಳು ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಸದನದಲ್ಲಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಧ್ವನಿ ಎತ್ತಿದಾಗ ಜಿಲ್ಲೆಯವರೇ ಆದ ಸಭಾಧ್ಯಕ್ಷರು ಸಮಸ್ಯೆ ಪರಿಹಾರದ ಚರ್ಚೆಗೆ ಅವಕಾಶ ನೀಡದಿರುವುದು ಖೇದಕರ ವಿಚಾರವಾಗಿದೆ. ಎಲ್ಲ ಶಾಸಕರು ಸದನದಲ್ಲಿ ಧ್ವನಿ ಎತ್ತಿ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಒತ್ತಾಯಿಸಿದ್ದಾರೆ.

ಆಸ್ಪತ್ರೆಗೆ ಪಟ್ಟು ಹಿಡಿದ ಶಾಸಕಿ ರೂಪಾಲಿ ನಾಯ್ಕ 

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಂಜೂರಾತಿಗೆ ಆರ್ಥಿಕ ಇಲಾಖೆ ಸಹಮತ ನೀಡಿಲ್ಲ ಎಂಬ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರ ಲಿಖಿತ ಉತ್ತರಕ್ಕೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಸದನದಲ್ಲಿ ಧ್ವನಿ ಎತ್ತಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 24 ಮನವಿಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಆಸ್ಪತ್ರೆ ಆಗಲೇಬೇಕೆಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಗಂಭೀರ ವಿಷಯ. ಈಗ ಸಚಿವರು ಇಲ್ಲದ ಕಾರಣ ಮುಂದಿನ ವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಆದರೂ ಪಟ್ಟು ಬಿಡದ ರೂಪಾಲಿ ನಾಯ್ಕ, ಜಿಲ್ಲೆಯಲ್ಲಿ ಆಸ್ಪತ್ರೆ ಆಗಲೇಬೇಕೆಂದು ಒತ್ತಾಯಿಸಿದರು. ಈ ವೇಳೆ ಸಭಾಧ್ಯಕ್ಷರು, ‘ಈಗ ಪ್ರಶ್ನೋತ್ತರ ಅವಧಿ, ಚರ್ಚೆಗೆ ಅವಕಾಶ ಇಲ್ಲ. ಮುಂದಿನ ವಾರ ಅವಕಾಶ ಮಾಡಿಕೊಡುತ್ತೇನೆ’ ಎಂದು ಹೇಳಿ ನಿರಾಕರಿಸಿದ ಘಟನೆ ನಡೆಯಿತು.

"ಸದನದಲ್ಲಿ ಸಭಾಧ್ಯಕ್ಷರು ಸೇರಿದಂತೆ ಸಚಿವರು, ಶಾಸಕರಿದ್ದರೂ ಜಿಲ್ಲೆಯ ಜನರ ಪರ ಧ್ವನಿ ಎತ್ತಿ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವ ತಾಕತ್ತು ನಮ್ಮವರಿಗಿಲ್ಲ. ಕಾರವಾರದ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ವೈದ್ಯರು ಸಲಕರಣೆಗಳನ್ನು ಪೂರೈಕೆ ಮಾಡಲಾಗುತ್ತಿಲ್ಲ. ಸರಕಾರ ದಿವಾಳಿಗೆ ಬಂದಂತೆ ಕಾಣುತ್ತಿದೆ. ಈಗಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕಾದರೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಜನರ ಪ್ರಾಣ ರಕ್ಷಣೆ ಮಾಡುವ ಕೆಲಸ ಮಾಡಬೇಕು".

-ಮಾಧವ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News