ಕೇರಳ: ಭಾರತ್ ಜೋಡೊ ಯಾತ್ರೆಗೆ ದೇಣಿಗೆ ನೀಡುವಂತೆ ಬಲವಂತ, ಮೂವರು ಕಾಂಗ್ರೆಸ್ ಕಾರ್ಯಕರ್ತರ ಅಮಾನತು

Update: 2022-09-16 07:08 GMT
Photo:NDTV

ಕೊಲ್ಲಂ(ಕೇರಳ): ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ ಯಾತ್ರೆ'ಗೆ ಎಂಟು ದಿನ ಕಳೆದಿರುವಂತೆಯೇ  ಕೇರಳದ ಕೊಲ್ಲಂನಲ್ಲಿ ಪಕ್ಷದ ಯಾತ್ರೆಗೆ ಕೆಲವು ಕಾರ್ಯಕರ್ತರು  ಹಣಕಾಸಿನ ನೆರವು ಕೋರಿದ್ದಾರೆ.  ಸಾಕಷ್ಟು ಹಣ  ನೀಡದಿದ್ದಕ್ಕಾಗಿ ತರಕಾರಿ ಅಂಗಡಿಯ ಮಾಲಿಕರೊಬ್ಬರಿಗೆ ಬೆದರಿಕೆ ಹಾಕುವ ಹಾಗೂ ಅಂಗಡಿಗಳನ್ನು ದೋಚುವ ವೀಡಿಯೊಗಳು ಹೊರಬಂದಿದ್ದು,  ಕಾಂಗ್ರೆಸ್ ಗೂಂಡಾಗಿರಿ ಆರೋಪದ ಟೀಕೆಗಳನ್ನು ಎದುರಿಸುತ್ತಿದೆ ಎಂದು NDTV ವರದಿ ಮಾಡಿದೆ.

ಈ ಘಟನೆಯನ್ನು 'ಸ್ವೀಕಾರಾರ್ಹವಲ್ಲ' ಎಂದು ಕರೆದಿರುವ ಪಕ್ಷವು, ಈ ಕೃತ್ಯದಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ.

"ಕೊಲ್ಲಂನಲ್ಲಿ ಸ್ವೀಕಾರಾರ್ಹವಲ್ಲದ ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ ಹಾಗೂ  ಅಂತಹ ನಡವಳಿಕೆಯು ಅಕ್ಷಮ್ಯವಾಗಿದೆ. ಕಾರ್ಪೊರೇಟ್ ದೇಣಿಗೆಗಳನ್ನು ಪಡೆಯುವ ಇತರರಿಗಿಂತ ಭಿನ್ನವಾಗಿ ಪಕ್ಷವು ಸ್ವಯಂಪ್ರೇರಣೆಯಿಂದ ಸಣ್ಣ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ'' ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.  ಸುಧಾಕರನ್ ಟ್ವೀಟ್ ಮಾಡಿದ್ದಾರೆ.

ಕೆಲವು ಕಾರ್ಯಕರ್ತರ ಗುಂಪು  ತರಕಾರಿ ಮಾರಾಟಗಾರರೊಂದಿಗೆ ವಾಗ್ವಾದ ನಡೆಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೆಲವರು 'ಭಾರತ್ ಜೋಡೋ ಯಾತ್ರೆ'ಯ ಪೋಸ್ಟರ್‌ಗಳನ್ನು ಹಿಡಿದಿದ್ದಾರೆ. ಕಾರ್ಯಕರ್ತರು  ಅಂಗಡಿ ಮಾಲಿಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಹಾಗೂ  ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅವರಲ್ಲಿ ಒಬ್ಬಾತ ತರಕಾರಿಗಳನ್ನು ಎಸೆದು ಅಂಗಡಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಿರುವುದು ಕಂಡು ಬಂದಿದೆ.  ಕಾರ್ಯಕರ್ತರು  2,000  ರೂ. ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ, ಆದರೆ ಅಂಗಡಿ ಮಾಲಿಕ  ಕೇವಲ  500 ರೂ. ನೀಡಿದ್ದರು. ಬೇಡಿಕೆಯ ಮೊತ್ತವನ್ನು ನೀಡದೆ ಇರುವವರು ಬದುಕುವುದಿಲ್ಲ ಎಂದು ಹಣ ಸಂಗ್ರಹಿಸುತ್ತಿದ್ದಾತ  ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News