ಕೇರಳದಲ್ಲಿ ಬೀದಿ ನಾಯಿ ಹಾವಳಿ: ಮಕ್ಕಳಿಗೆ ರಕ್ಷಣೆ ನೀಡಲು ಏರ್‌ ಗನ್‌ ಕೈಯ್ಯಲ್ಲಿ ಹಿಡಿದು ಸಾಗಿದ ವ್ಯಕ್ತಿ

Update: 2022-09-17 08:07 GMT

ಕೊಝಿಕ್ಕೋಡ್ : ಕೇರಳದಲ್ಲಿ ಬೀದಿ ನಾಯಿ ಹಾವಳಿಯ ನಡುವೆ ವ್ಯಕ್ತಿಯೊಬ್ಬ ತನ್ನ ಪುತ್ರಿ ಹಾಗೂ ನೆರೆಹೊರೆಯ ಮಕ್ಕಳನ್ನು ಸುರಕ್ಷಿತವಾಗಿ ಮದರಸಾಗೆ ಕರೆದುಕೊಂಡು ಹೋಗುವ ಸಲುವಾಗಿ ಕೈಯ್ಯಲ್ಲಿ ಏರ್ ಗನ್ ಹಿಡಿದುಕೊಂಡು ಸಾಗುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ಮಕ್ಕಳೆಲ್ಲ ಹಿಂದಿನಿಂದ ಬರುತ್ತಿರುವಂತೆಯೇ ಕೈಯ್ಯಲ್ಲಿ ಏರ್‌ ಗನ್‌ ಹಿಡಿದುಕೊಂಡಿರುವ ಸಮೀರ್ ಟಿ ಎಂಬ ಪಳ್ಳಿಕೆರೆಯ ಬೇಕಲದ ಹದಾದ ನಗರ ನಿವಾಸಿ ವ್ಯಕ್ತಿಯೊಬ್ಬರು ತಮ್ಮ  ಒಂಬತ್ತು ವರ್ಷದ ಪುತ್ರಿ ರಿಫಾ ಸಹಿತ ಇತರ ಮಕ್ಕಳನ್ನು  ಸುರಕ್ಷಿತವಾಗಿ ಕರೆದೊಯ್ಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಯಾವುದೇ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ನಡೆಸಿದರೆ ಗುಂಡಿಕ್ಕುವುದಾಗಿಯೂ ಆ ವ್ಯಕ್ತಿ ಎಚ್ಚರಿಸುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಸಮೀರ್ ಪುತ್ರ ಈ ವೀಡಿಯೋವನ್ನು ಚಿತ್ರೀಕರಿಸಿ ಅದನ್ನು ವಾಟ್ಸ್ಯಾಪ್‌ನಲ್ಲಿ ಶೇರ್‌ ಮಾಡಿದ್ದು ಅದು ತಕ್ಷಣ ವೈರಲ್‌ ಆಗಿದೆ.

ಬೀದಿ ನಾಯಿಗಳ ಹಾವಳಿಯಿಂದಾಗಿ ತನಗೆ ಭಯವಾಗುತ್ತಿದೆ, ಮದರಸಾಗೆ ಹೋಗುವುದಿಲ್ಲ ಎಂದು ಪುತ್ರಿ ಹೇಳಿದ ನಂತರ ತಾನು ಎಲ್ಲಾ ಮಕ್ಕಳಿಗೆ ರಕ್ಷಣೆಯೊದಗಿಸಿ ಮದರಸಾಗೆ ಕಳುಹಿಸಿದ್ದಾಗಿ ಸಮೀರ್‌ ಹೇಳಿದ್ದಾರೆ.

ʻʻಮದರಸಾ ನಮ್ಮ ಮನೆಯಿಂದ 60 ಮೀಟರ್‌ ದೂರವಿದೆ ಆದರೆ ದಾರಿಯುದ್ದಕ್ಕೂ ಹಲವು ಬೀದಿ ನಾಯಿಗಳಿವೆ. ಸ್ಥಳೀಯ ಹಲವು ಇತರ ಮಕ್ಕಳೂ ತಾವು ಮದರಸಾಗೆ ತೆರಳಲು ಭಯಪಡುತ್ತಿರುವುದಾಗಿ ಹೇಳಿದರು. ನಂತರ ಪತ್ನಿಗೆ ಏರ್‌ ಗನ್‌ ತರುವಂತೆ ಹೇಳಿ ಮಕ್ಕಳಿಗೆ ಧೈರ್ಯ ತುಂಬಿ ಏರ್‌ ಗನ್‌ ಹಿಡಿದುಕೊಂಡು ಅವರೊಂದಿಗೆ ಸಾಗಿದೆ,ʼʼಎಂದು ಸಮೀರ್‌ ಹೇಳಿದ್ದಾರೆ.

ಗುರುವಾರ ಮದರಸಾದಿಂದ ಹಿಂದಿರುಗುತ್ತಿದ್ದ ಒಬ್ಬ ವಿದ್ಯಾರ್ಥಿಗೆ ಬೀದಿ ನಾಯಿ ಕಚ್ಚಿದೆ ಎಂದು ಅವರು ಹೇಳಿದರಲ್ಲದೆ ಏರ್‌ ಗನ್‌ ಬಳಸಲು ಯಾವುದೇ ಪರವಾನಗಿ ಬೇಕಿಲ್ಲ, ಅದರ ಸದ್ದಿಗೆ ನಾಯಿಗಳು ಓಡಿ ಹೋಗುತ್ತವೆ ಎಂದು ತಿಳಿಸಿದ್ದಾರೆ. ಮಕ್ಕಳು ಮದರಸಾಗೆ ತೆರಳುವಾಗ ಹೆತ್ತವರೂ ಅವರ ಜೊತೆಗೆ ಇರಬೇಕು ಎಂದು ಮದರಸಾ ಆಡಳಿತ ಹೇಳಿದೆ ಎಂದು ಸಮೀರ್‌ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News