ಗರ್ಭಿಣಿ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ: ಸಾಲ ವಸೂಲಾತಿ ಏಜಂಟ್‌ ಸಹಿತ 4 ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2022-09-17 08:45 GMT
ಸಾಂದರ್ಭಿಕ ಚಿತ್ರ

ರಾಂಚಿ: ಸಾಲ ವಸೂಲಾತಿ ಏಜಂಟ್‌ ಒಬ್ಬ ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್‌ (tractor) ಅನ್ನು ಗರ್ಭಿಣಿಯೊಬ್ಬರ ಮೇಲೆ ಹರಿಸಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಜಾರ್ಖಂಡ್‌ನ ಹಝಾರಿಬಾಗ್‌ ಜಿಲ್ಲೆಯ ಇಚಕ್‌ ಎಂಬಲ್ಲಿಂದ ಗುರುವಾರ ವರದಿಯಾಗಿದೆ.

ಮೃತ ಮಹಿಳೆ 27 ವರ್ಷದವಳಾಗಿದ್ದು,  ಅಂಗವೈಕಲ್ಯವಿರುವ ರೈತನೊಬ್ಬನ ಮಗಳಾಗಿದ್ದಳು. ಗುರುವಾರ ರೈತನ ಮೊಬೈಲ್‌ ಫೋನ್‌ಗೆ ಸಾಲ ನೀಡಿದ್ದ ಸಂಸ್ಥೆ ಮಹೀಂದ್ರ ಫೈನಾನ್ಸ್‌ನಿಂದ ಸಂದೇಶ ಬಂದಿತ್ತಲ್ಲದೆ ಟ್ರ್ಯಾಕ್ಟರ್‌ ಖರೀದಿಗೆ ಪಡೆದಿದ್ದ ರೂ 1.3 ಲಕ್ಷ ಸಾಲ ತಕ್ಷಣ ವಾಪಸ್‌ ನೀಡುವಂತೆ ಸೂಚಿಸಲಾಗಿತ್ತು. ರೈತನ ಟ್ರ್ಯಾಕ್ಟರ್‌ ಅನ್ನು ಹತ್ತಿರದ ಪೆಟ್ರೋಲ್‌ ಬಂಕ್‌ ಸಮೀಪ ಇರಿಸಲಾಗಿತ್ತು ಹಾಗೂ ಇದನ್ನು ತೆಗೆದುಕೊಂಡು ಹೋಗುವುದಾಗಿಯೂ ಎಚ್ಚರಿಸಲಾಗಿತ್ತು.

ರೈತ ತಕ್ಷಣ ತನ್ನ ಟ್ರ್ಯಾಕ್ಟರ್‌ ಇರುವ ಸ್ಥಳಕ್ಕೆ ಧಾವಿಸಿದ್ದರೂ ಅದಾಗಲೇ ಸಾಲ ವಸೂಲಾತಿ ಏಜಂಟ್‌ ಅದನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂತು. ತಕ್ಷಣ ರೂ 1.2 ಲಕ್ಷ ಪಾವತಿಸುವುದಾಗಿ ರೈತ ಹೇಳಿದರೂ ಬಾಕಿ ಸಂಪೂರ್ಣ ಮೊತ್ತ ಪಾವತಿಸುವಂತೆ ಆತನಿಗೆ ಹೇಳಲಾಗಿತ್ತು.

ಅಷ್ಟರಲ್ಲಿ ರೈತನ ಗರ್ಭಿಣಿ ಪುತ್ರಿ ಅಲ್ಲಿಗೆ ಓಡೋಡಿ ಬಂದಾಗ ಟ್ರ್ಯಾಕ್ಟರ್‌ ಅನ್ನು ಆಕೆಯ ಮೇಲೆ ಹರಿಸಿದ ಪರಿಣಾಮ ಆಕೆ ಮೃತಪಟ್ಟಿದ್ದಳು. ಸಾಲ ವಸೂಲಾತಿ ಏಜಂಟ್‌ ಹಾಗೂ ಮಹೀಂದ್ರ ಫೈನಾನ್ಸ್‌ನ ಮ್ಯಾನೇಜರ್‌ ಸೇರಿದಂತೆ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಘಡನೆ ನಡೆದ ಬೆನ್ನಲ್ಲೇ ಹಝಾರಿಬಾಗ್‌ ಕಲೆಕ್ಟರೇಟ್‌ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ತಕ್ಷಣ ಬಂಧನಕ್ಕೆ ಆಗ್ರಹಿಸಿದ್ದರಲ್ಲದೆ ಮಹಿಳೆಯ ಕುಟುಂಬಕ್ಕೆ ರೂ 20 ಲಕ್ಷ ಪರಿಹಾರಕ್ಕೂ ಬೇಡಿಕೆಯಿರಿಸಿದ್ದರು. ತಪ್ಪಿತಸ್ಥರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು.

ಘಟನೆ ಕುರಿತು ಪ್ರತಿಕ್ರಿಯಿಸಿದ ಮಹೀಂದ್ರ ಗ್ರೂಪ್‌ನ ಆಡಳಿತ ನಿರ್ದೇಶಕ  ಮತ್ತು ಸಿಇಒ ಅನೀಶ್‌ ಶಾ,  ಘಟನೆಯನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು, ಸಾಲ ವಸೂಲಾತಿಗೆ ಮೂರನೇ ಪಕ್ಷದ ಏಜನ್ಸಿಗಳನ್ನು ಬಳಸುವ ಪದ್ಧತಿಯನ್ನೂ ಪರಿಶೀಲಿಸಲಾಗುವುದು. ಈ ಸಮಯದಲ್ಲಿ ದುಃಖತಪ್ತ ಕುಟುಂಬದ ಜೊತೆಗೆ ನಾವಿದ್ದೇವೆ,ʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಬೀದಿ ನಾಯಿ ಹಾವಳಿ: ಮಕ್ಕಳಿಗೆ ರಕ್ಷಣೆ ನೀಡಲು ಏರ್‌ ಗನ್‌ ಕೈಯ್ಯಲ್ಲಿ ಹಿಡಿದು ಸಾಗಿದ ವ್ಯಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News