ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ನ ತಯಾರಿಕಾ ಲೈಸನ್ಸ್‌ ರದ್ದುಗೊಳಿಸಿದ ಮಹಾರಾಷ್ಟ್ರ ಎಫ್‌ಡಿಎ

Update: 2022-09-17 10:21 GMT

ಮುಂಬೈ: 'ಸಾರ್ವಜನಿಕರ ಹಿತದೃಷ್ಟಿಯಿಂದʼ ಮಹಾರಾಷ್ಟ್ರಾದ ಫುಡ್‌ ಎಂಡ್‌ ಡ್ರಗ್ಸ್‌ ಅಡ್ಮಿನಿಸ್ಟ್ರೇಶನ್‌ ಮಹತ್ವದ ಕ್ರಮವೊಂದರಲ್ಲಿ ಜಾನ್ಸನ್‌ & ಜಾನ್ಸನ್‌ ಪ್ರೈವೇಟ್‌ ಲಿಮಿಟೆಡ್‌ (Johnson & Johnson Pvt Ltd)  ಸಂಸ್ಥೆಯ ಬೇಬಿ ಪೌಡರ್‌ ತಯಾರಿಕಾ ಲೈಸನ್ಸ್‌ ಅನ್ನು ರದ್ದುಗೊಳಿಸಿದೆ. ಈ ಉತ್ಪನ್ನವು ಶಿಶುಗಳ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಫ್‌ಡಿಎ ಹೇಳಿದೆ.

ಈ ಬೇಬಿ ಪೌಡರ್‌ನ ಸ್ಯಾಂಪಲ್‌ಗಳು ಲ್ಯಾಬ್‌ ಪರೀಕ್ಷೆ ವೇಳೆ ಪಿಎಚ್‌ ಪ್ರಮಾಣಕ್ಕೆ ಸಂಬಂಧಿಸಿದ ಮಾನದಂಡಕ್ಕೆ ಬದ್ಧವಾಗಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಕೊಲ್ಕತ್ತಾ ಮೂಲದ ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೊರೇಟರಿ ವರದಿ ಆಧಾರದಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಎಫ್‌ಡಿಎ ತಿಳಿಸಿದೆ.

ಗುಣಮಟ್ಟ ತಪಾಸಣೆಗೋಸುಗ ಬೇಬಿ ಪೌಡರ್‌ನ ಮಾದರಿಗಳನ್ನು ಪುಣೆ ಮತ್ತು ನಾಸಿಕ್‌ನಿಂದ ಸಂಗ್ರಹಿಸಲಾಗಿತ್ತು ಹಾಗೂ ಶಿಶುಗಳಿಗೆ ಬಳಸಲಾಗುವ ಈ ಪೌಡರ್‌ ಐಎಸ್‌ 5339:2004 ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ತಿಳಿದು ಬಂದ ನಂತರ ಕಂಪೆನಿಗೆ  ಡ್ರಗ್ಸ್‌ ಕಾಸ್ಮೆಟಿಕ್ಸ್‌  ಕಾಯಿದೆ 1940 ಇದರ ನಿಯಮಗಳಡಿಯಲ್ಲಿ ಶೋಕಾಸ್‌ ನೋಟಿಸ್‌ ಜಾರಿಯಾಗಿತ್ತಲ್ಲದೆ ಮಾರುಕಟ್ಟೆಯಲ್ಲಿರುವ ಬೇಬಿ ಪೌಡರ್‌ ಸ್ಟಾಕ್‌ಗಳನ್ನು ವಾಪಸ್‌ ಪಡೆಯುವಂತೆ ಸೂಚಿಸಲಾಯಿತಾದರೂ ಕಂಪೆನಿ ಇದಕ್ಕೆ ಒಪ್ಪದೆ ತನ್ನ ಉತ್ಪನ್ನದ ಮಾದರಿಯನ್ನು ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೊರೇಟರಿಗೆ ಕಳುಹಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.

ಬೇಬಿ ಪೌಡರ್‌ ತಯಾರಿಕಾ ಲೈಸನ್ಸ್‌ ರದ್ದುಗೊಳಿಸಿದ ಕ್ರಮದ ಕುರಿತು ಜಾನ್ಸನ್‌ & ಜಾನ್ಸನ್‌ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News