ಸೋನಾಲಿ ಫೋಗಟ್ ತಂಗಿದ್ದ ಹೊಟೇಲ್ ಕೊಠಡಿಗಳನ್ನು ಶೋಧಿಸಿದ ಸಿಬಿಐ ತಂಡ

Update: 2022-09-17 09:00 GMT
Photo:twitter

ಪಣಜಿ: ಕಳೆದ ತಿಂಗಳು ಗೋವಾದಲ್ಲಿ ಹರ್ಯಾಣದ ರಾಜಕಾರಣಿ ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಪ್ರಕರಣದ (mysterious death of Haryana politician Sonali Phogat)ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ತಂಡವು (ಸಿಬಿಐ) ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಬಿಜೆಪಿ ನಾಯಕಿ ಹಾಗೂ ಆಕೆಯ  ಆಪ್ತರು ತಂಗಿದ್ದ ಹೋಟೆಲ್‌ನ ಕೊಠಡಿಗಳನ್ನು ಶೋಧಿಸಿದೆ.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮುನ್ನ ತನಿಖೆ ನಡೆಸುತ್ತಿದ್ದ ಗೋವಾ ಪೊಲೀಸರು, ತನಿಖೆಯ ಭಾಗವಾಗಿ ಹೋಟೆಲ್, ಗ್ರ್ಯಾಂಡ್ ಲಿಯೋನಿಯಲ್ಲಿನ ಕೊಠಡಿಗಳನ್ನು ಸೀಲ್ ಮಾಡಿದ್ದರು.

ಸಿಬಿಐ ತಂಡವು ದಾಖಲೆಗಳನ್ನು ಸಂಗ್ರಹಿಸುತ್ತದೆ ಮತ್ತು ಮಾಜಿ ಟಿವಿ ಆ್ಯಂಕರ್ ಫೋಗಟ್  ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ಪರೀಕ್ಷಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಸಂವಾದ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರ್ಯಾಣದಲ್ಲಿರುವ ಸೋನಾಲಿ ಫೋಗಟ್ ಸಹೋದರರ ಹೇಳಿಕೆಯನ್ನು ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ತೆಗೆದುಕೊಂಡಿದೆ.

"ಸಿಬಿಐ ತಂಡವು ನಮ್ಮ ಮನೆಗೆ ಬಂದು ನಮ್ಮ ಕುಟುಂಬದ ಹೇಳಿಕೆಯನ್ನು ದಾಖಲಿಸಿದೆ. ನಂತರ ಅವರು ನಮ್ಮ ಸಹೋದರನ ಮನೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ" ಎಂದು ಸೋನಾಲಿ ಫೋಗಟ್ ಅವರ ಸಹೋದರ ವತನ್ ಧಾಕಾ ಹೇಳಿದ್ದಾರೆ.

ಸೋನಾಲಿ ಫೋಗಟ್ ಸಾವಿನ ಹಿಂದೆ ಪಿತೂರಿ ಇದೆ ಎಂದು ಆಕೆಯ ಕುಟುಂಬ ಈ ಹಿಂದೆ ಆರೋಪಿಸಿತ್ತು. ಸಿಬಿಐ ತನಿಖೆಯಿಂದ ಮಾತ್ರ ಸತ್ಯವನ್ನು ಹೊರತರಬಹುದು ಎಂದು ಹೇಳಿತ್ತು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪತ್ರದಲ್ಲಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News