ಜಾಮಿಯಾ ಮಿಲ್ಲಿಯಾ ಪ್ರವೇಶಿಸದಂತೆ ಸಫೂರಾ ಝರ್ಗರ್ ಗೆ ನಿರ್ಬಂಧ

Update: 2022-09-17 09:11 GMT
Student activist Safoora Zargar

ಹೊಸದಿಲ್ಲಿ : ಸಂಶೋಧನಾ ವಿದ್ಯಾರ್ಥಿನಿ ಮತ್ತು ಹೋರಾಟಗಾರ್ತಿ ಸಫೂರಾ ಝರ್ಗರ್ (Safoora Zargar) ಅವರಿಗೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಪ್ರಬಂಧ ಸಲ್ಲಿಸಿಲ್ಲ ಎಂಬ ಕಾರಣಕ್ಕಾಗಿ ಆಕೆಯ ಎಂಫಿಲ್ ದಾಖಲಾತಿಯನ್ನು ರದ್ದುಗೊಳಿಸಿದ ನಂತರ ಆಕೆ ವಿವಿ ಆವರಣದಲ್ಲಿ ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ʻʻವಿವಿಯ ಶಾಂತಿಯುತ ವಾತಾವರಣವನ್ನು ಹದಗೆಡಿಸಲು ಹೆಚ್ಚಾಗಿ ಹೊರಗಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅಪ್ರಸ್ತುತ ಮತ್ತು ಆಕ್ಷೇಪಾರ್ಹ ವಿಚಾರಗಳನ್ನು ಕೈಗೆತ್ತಿಕೊಂಡು  ಪ್ರತಿಭಟನೆಗಳನ್ನು ಸಫೂರಾ ಝರ್ಗರ್ (ಮಾಜಿ ವಿದ್ಯಾರ್ಥಿನಿ) ನಡೆಸಿದ್ದಾರೆಂದು ಕಂಡು ಬಂದಿದೆ. ಆಕೆ ತನ್ನ ದುರುದ್ದೇಶಿತ ರಾಜಕೀಯ ಅಜೆಂಡಾಕ್ಕಾಗಿ ವಿವಿಯ ವೇದಿಕೆಯನ್ನು ಬಳಸಿ ಅಮಾಯಕ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಸಂಸ್ಥೆಯ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕ್ಯಾಂಪಸ್ಸಿಗೆ ಆಕೆಯ ಪ್ರವೇಶಾತಿಯನ್ನು ತಕ್ಷಣದಿಂದ ನಿರ್ಬಂಧಿಸಲಾಗಿದೆ,'' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಠಿಣ ಯುಎಪಿಎ ಅನ್ವಯ  ಸಫೂರ ಪ್ರಕರಣ ಎದುರಿಸಿದ್ದರು. ಆಕೆ ಗರ್ಭಿಣಿ ಎಂಬ ಕಾರಣಕ್ಕಾಗಿ ಮಾನವೀಯ ನೆಲೆಯಲ್ಲಿ ಆಕೆಗೆ ಜೂನ್ 2020 ರಲ್ಲಿ ಜಾಮೀನು ನೀಡಲಾಗಿತ್ತು.

ಎಂಫಿಎಲ್  ಕೋರ್ಸಿನಿಂದ ಸಫೂರ ಅವರನ್ನು ತೆಗೆದುಹಾಕಿರುವುದರ ವಿರುದ್ಧ ಪ್ರತಿಭಟಿಸಿದ ಹಲವು ವಿದ್ಯಾರ್ಥಿಗಳಿಗೆ ಜಾಮಿಯಾ ಮಿಲಿಯಾ ಆಡಳಿತ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಸಫೂರಾರನ್ನು ಆಗಸ್ಟ್ 29ರಂದು ಕೋರ್ಸಿನಿಂದ ಕೈಬಿಟ್ಟ ನಂತರ ಆಕೆಯನ್ನು ಮತ್ತ ಕೋರ್ಸಿಗೆ ದಾಖಲಿಸಿಕೊಳ್ಳಬೇಕೆಂದು ಹಾಗೂ ಪ್ರಬಂಧ ಸಲ್ಲಿಸಲು ಅವಧಿಯನ್ನು ವಿಸ್ತರಿಸಬೇಕೆಂದು ಕೋರಿ ಆಕೆ ಹಾಗೂ ಹಲವು ಇತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News