ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್‌ಗೆ ಜಾಮೀನು ಮಂಜೂರಾದರೂ ಶೂರಿಟಿಗಾಗಿ ಪರದಾಡುತ್ತಿರುವ ವಕೀಲರು; ವರದಿ

Update: 2022-09-17 13:09 GMT
ಸಿದ್ದೀಕ್ ಕಪ್ಪನ್‌ 

ಹೊಸದಿಲ್ಲಿ: ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್‌(Siddique Kappan) ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರುಗೊಳಿಸಿ ಒಂದು ವಾರದ ಮೇಲಾಗಿದೆ. ಅವರಿಗೆ ಶೂರಿಟಿ ಆಗಿ ನಿಲ್ಲಲು ಇಬ್ಬರು ವ್ಯಕ್ತಿಗಳನ್ನು ಹುಡುಕಲು ಅವರ ವಕೀಲರು ವಸ್ತುಶಃ ಪರದಾಡುತ್ತಿದ್ದಾರೆ. ಜಾಮೀನು ಷರತ್ತಿನ ಪ್ರಕಾರ ಇಬ್ಬರು ಶೂರಿಟಿ ಅಗತ್ಯವಿರುವುದರಿಂದ ಕಪ್ಪನ್‌ ಅವರ ಬಿಡುಗಡೆ ವಿಳಂಬವಾಗಿದೆ ಎಂದು thequint.com ವರದಿ ಮಾಡಿದೆ.

"ಪ್ರಕರಣದ ಸೂಕ್ಷ್ಮ ಸ್ವರೂಪದಿಂದಾಗಿ ಹಲವು ಮಂದಿ ಕಪ್ಪನ್‌ ಅವರಿಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ," ಎಂದು ಅವರ ವಕೀಲ ಮುಹಮ್ಮದ್‌ ದಾನಿಶ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಕಪ್ಪನ್‌ ಅವರಿಗೆ ಜಾಮೀನು ಮಂಜೂರುಗೊಳಿಸಿ ಸೆಪ್ಟೆಂಬರ್‌ 9ರಂದು ಆದೇಶ ಹೊರಡಿಸಿದ ನಂತರ ಸೆಪ್ಟೆಂಬರ್‌ 12 ರಂದು ಅವರನ್ನು ಲಕ್ನೋದ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಲ್ಲಿ ಜಾಮೀನು ಷರತ್ತುಗಳನ್ನು ಓದಿ ಹೇಳಲಾಗಿದೆ. ತಲಾ ರೂ. 1 ಲಕ್ಷದ ಇಬ್ಬರು ಶೂರಿಟಿಗಳು ಹಾಗೂ ಅದೇ ಮೊತ್ತದ ವೈಯಕ್ತಿಕ ಬಾಂಡ್‌ ಹಾಜರುಪಡಿಸುವಂತೆ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಖಾತೆಯಲ್ಲಿ ರೂ 1 ಲಕ್ಷದಷ್ಟು ಹಣ ಅಥವಾ ಸ್ವತ್ತುಗಳಿರುವವರು ಶೂರಿಟಿ ನಿಲ್ಲಲು ಸಿದ್ಧರಿರುವ ಇಬ್ಬರು ನಮಗೆ ಬೇಕಾಗಿದೆ,ʼʼ ಎಂದು ದಾನಿಶ್‌ ಹೇಳಿದ್ದಾರೆಂದು thequint.com ವರದಿ ಮಾಡಿದೆ.

ಪತ್ರಕರ್ತ ಉತ್ತರ ಪ್ರದೇಶ ನಿವಾಸಿಯಲ್ಲದೇ ಇರುವುದರಿಂದ ಕಪ್ಪನ್‌ ಅವರ ಪತ್ನಿ ಹಾಗೂ ಸಹೋದರ ಶೂರಿಟಿ ಆಗಿ ನಿಲ್ಲಬಹುದೇ ಎಂದು ನ್ಯಾಯಾಲಯಕ್ಕೆ ಕೇಳಲಾಯಿತಾದರೂ ನಕಾರಾತ್ಮಕ ಉತ್ತರ ಬಂದಿದೆ ಎಂದು ವಕೀಲರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಪ್ಪನ್‌ ಅವರಿಗೆ ತಿಳಿದಿರುವವರನ್ನು ಅವರ ವಕೀಲರು ಸಂಪರ್ಕಿಸುತ್ತಿದ್ದಾರಾದರೂ ಎಲ್ಲರೂ ಹಿಂಜರಿಕೆ ತೋರುತ್ತಿದ್ದಾರೆ.

ಯುಎಪಿಎ ಪ್ರಕರಣದಲ್ಲಿ ಕಪ್ಪನ್‌ ಅವರಿಗೆ ಜಾಮೀನು ದೊರಕಿದೆಯಾದರೂ ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಜಾಮೀನು ಅರ್ಜಿ ಸೆಪ್ಟೆಂಬರ್‌ 19ರಂದು ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News