×
Ad

26/11 ಮುಂಬೈ ದಾಳಿಯ ‘ಸೂತ್ರಧಾರಿ’ ಮಿರ್ ವಿಶ್ವಸಂಸ್ಥೆ ಕಪ್ಪು ಪಟ್ಟಿಗೆ ಸೇರ್ಪಡೆ ಪ್ರಸ್ತಾವನೆಗೆ ಚೀನಾ ತಡೆ

Update: 2022-09-17 21:31 IST

ವಿಶ್ವಸಂಸ್ಥೆ,ಸೆ.17: 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರಧಾರಿ ಹಾಗೂ ಭಾರತದ ‘ಮೋಸ್ಟ್ ವಾಂಟೆಡ್’ ಉಗ್ರಗಾಮಿಗಳಲ್ಲೊಬ್ಬನಾದ ಪಾಕಿಸ್ತಾನದ ಮೂಲದ ಲಷ್ಕರೆ ತಯ್ಯಬ ಗುಂಪಿನ ತೀವ್ರವಾದಿ ಸಾಜಿದ್ ಮಿರ್‌ನನ್ನು ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಅಮೆರಿಕ ಹಾಗೂ ಭಾರತದ ಪ್ರಸ್ತಾವನೆಗೆ ಚೀನಾ ತಡೆಹಿಡಿದಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಪಾಕ್ ಮೂಲದ ಉಗ್ರರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿರುವುದು ಇದು ನಾಲ್ಕನೇ ಸಲವಾಗಿದೆ.

    ವಿಶ್ವಸಂಸ್ಥೆ ರಚಿಸಿರುವ ‘ಅಲ್‌ಖಾಯಿದಾ ವಿರುದ್ಧ ನಿರ್ಬಂಧಗಳ ಸಮಿತಿ’ಯ ನಿಯಾಮವಳಿಗಳ ಅನ್ವಯ ಮಿರ್‌ನನ್ನು ಜಾಗತಿಕ ಭಯೋತ್ಪಾದಕರ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕುವ, ಆತನ ಪ್ರಯಾಣಕ್ಕೆ ನಿಷೇಧ ವಿಧಿಸುವ ಹಾಗೂ ಶಸ್ತ್ರಾಸ್ತ್ರಗಳ ಪೂರೈಕೆಗೆ ತಡೆ ವಿಧಿಸಬೇಕೆಂಬ ಭಾರತದ ಸಹಭಾಗಿತ್ವದೊಂದಿಗೆ ರೂಪಿಸಲಾಗಿದ್ದ ಪ್ರಸ್ತಾವನೆಯನ್ನು ಅಮೆರಿಕವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಂಡಿಸಿತ್ತು.

 26/11 ಮುಂಬೈ ಭಯೋತ್ಪಾದಕ ದಾಳಿಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಮಿರ್‌ನ ತಲೆಗೆ ಅಮೆರಿಕ 5 ದಶಲಕ್ಷ ಡಾಲರ್‌ಗಳ ಪ್ರಶಸ್ತಿಯನ್ನು ಘೋಷಿಸಿತ್ತು.ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಜೂನ್‌ನಲ್ಲಿ ಪಾಕಿಸ್ತಾನದ ಭ.ಯೋತ್ಪಾದಕ ನಿಗ್ರಹ ನ್ಯಾಯಾಲಯವು ಆತನಿಗೆ 15 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News