ಪಶ್ಚಿಮಬಂಗಾಳ ನೇಮಕಾತಿ ಹಗರಣ: ಪಾರ್ಥಾ ಚಟರ್ಜಿಯನ್ನು ಸೆ. 21ರ ವರೆಗೆ ಸಿಬಿಐ ಕಸ್ಟಡಿಗೆ ನೀಡಿದ ನ್ಯಾಯಾಲಯ

Update: 2022-09-17 17:03 GMT

ಕೋಲ್ಕತಾ, ಸೆ. 17: ಅಧ್ಯಾಪಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಅವರನ್ನು ಕೋಲ್ಕತ್ತಾ ನ್ಯಾಯಾಲಯ ಶುಕ್ರವಾರ ಸೆಪ್ಟಂಬರ್ 21ರ ವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.

ಪಶ್ಚಿಮಬಂಗಾಳ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಕಲ್ಯಾಣ್ಮಯಿ ಗಂಗೂಲಿ ಅವರನ್ನು ಕೂಡ ನ್ಯಾಯಾಲಯ ಇದೇ ಅವಧಿಗೆ ಸಿಬಿಐ ಕಸ್ಟಡಿಗೆ ನೀಡಿದೆ. 
ಜಾರಿ ನಿರ್ದೇಶನಾಲಯ ಪಾರ್ಥಾ ಚಟರ್ಜಿ ಅವರನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಬಂಧಿಸಿತ್ತು. ಕೋಲ್ಕತ್ತಾ ನ್ಯಾಯಾಲಯ ಅವರನ್ನು ಸೆಪ್ಟಂಬರ್ 28ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.  ಅವರ ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಸಿಬಿಐ ಶುಕ್ರವಾರ ಕೋರಿತ್ತು.

ಇದು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿರುವ ಜಾಲ. ಪಾರ್ಥಾ ಚಟರ್ಜಿ ಅವರು ಇದರ ಸೂತ್ರದಾರ.   ಈ ನೇಮಕಾತಿ ಹಗರಣದಲ್ಲಿ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ಉದ್ಯೋಗ ನೀಡಿದ ಹಗರಣ ನಡೆದ 2019ರಲ್ಲಿ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದರು ಎಂದು ಅದು ತಿಳಿಸಿದೆ.

9ರಿಂದ 12ನೇ ತರಗತಿಗಳ ಸಹಾಯಕ ಅಧ್ಯಾಪಕರು, ಪ್ರಾಥಮಿಕ ಶಾಲೆಯ ಅಧ್ಯಾಪಕರು, ಗ್ರೂಪ್ ಸಿ ಹಾಗೂ ಗ್ರೂಪ್ ಸಿ ಸಿಬ್ಬಂದಿಯ ನಿಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪದ ಕುರಿತು ತನಿಖೆ ನಡೆಸುವಂತೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಜೂನ್ 15ರಂದು ಸಿಬಿಐಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News