ಪಶ್ಚಿಮ ಬಂಗಾಳ: ತರಗತಿ ನಡೆಯುತ್ತಿದ್ದಂತೆಯೇ ಶಾಲಾ ಮೇಲ್ಛಾವಣಿ ಮೇಲೆ ಕಚ್ಛಾ ಬಾಂಬ್ ಸ್ಪೋಟ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ತರಗತಿಗಳು ನಡೆಯುತ್ತಿರುವಾಗ ಶಾಲಾ ಕಟ್ಟಡದ ಛಾವಣಿಯ ಮೇಲೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ಅಂತಸ್ತಿನ ಕಟ್ಟಡದ ಮೊದಲ ಎರಡು ಮಹಡಿಯಲ್ಲಿರುವ ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದ ಕಾರಣ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಶಬ್ದ ಕೇಳಿ ಭಯಭೀತರಾದ ವಿದ್ಯಾರ್ಥಿಗಳು ತಕ್ಷಣವೇ ಶಾಲಾ ಆವರಣವನ್ನು ತೊರೆದಿದ್ದಾರೆಂದು ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಬರಾಕ್‌ಪುರ ಪೊಲೀಸ್ ಕಮಿಷನರೇಟ್‌ನ ಉನ್ನತ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೇ ಕಚ್ಚಾ ಬಾಂಬ್‌ನಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಹತ್ತಿರದ ಕಟ್ಟಡದಿಂದ ಬಾಂಬ್ ಎಸೆದಿದ್ದೇ ಅಥವಾ ಅಲ್ಲೇ ಇಟ್ಟ ಬಾಂಬ್ ಏಕಾಏಕಿ ಸ್ಫೋಟಗೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಬಿಜೆಪಿಯ ಹೂಗ್ಲಿ ಸಂಸದ ಲಾಕೆಟ್ ಚಟರ್ಜಿ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
"ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಶಾಲಾ ಮಕ್ಕಳೂ ಸುರಕ್ಷಿತವಾಗಿಲ್ಲ. ಪಶ್ಚಿಮ ಬಂಗಾಳದಾದ್ಯಂತ ಮನೆಗಳು ಮತ್ತು ಪಕ್ಷದ ಕಚೇರಿಗಳಲ್ಲಿ ಬಾಂಬ್‌ಗಳು ಪತ್ತೆಯಾಗಿವೆ. ಇಂದಿನ ಘಟನೆಯು ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಸೂಚಕವಾಗಿದೆ. ನಮಗೆ ರಾಜ್ಯ ಪೊಲೀಸರ ಮೇಲೆ ಅಥವಾ ಸಿಐಡಿ ಪೊಲೀಸರ ಮೇಲೆ ನಂಬಿಕೆ ಇಲ್ಲ. ಸಿಬಿಐ ತನಿಖೆ ಮಾಡಿ ಸತ್ಯವನ್ನು ಬಹಿರಂಗಪಡಿಸಲು ನಾವು ಆಗ್ರಹಿಸುತ್ತೇವೆ," ಎಂದು ಅವರು ಹೇಳಿದರು.