ಎಸ್‌ಸಿಒದ ಪ್ರವಾಸೋದ್ಯಮ, ಸಾಂಸ್ಕೃತಿಕ ರಾಜಧಾನಿಯಾಗಿ ವಾರಣಾಸಿ ಘೋಷಣೆ
ಸಮರಖಂಡ್, ಸೆ. 17: ಉಜ್ಬೇಕಿಸ್ಥಾನದ ಸಮರಖಂಡ್‌ನಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಶೃಂಗ ಸಭೆಯ 22ನೇ ಸಭೆಯಲ್ಲಿ ವಾರಣಾಸಿಯನ್ನು 2022-23 ವರ್ಷಕ್ಕೆ ಮೊದಲ ಬಾರಿಗೆ ಎಸ್‌ಸಿಒನ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಘೋಷಣೆ ಮಾಡಿದೆ.
ಈ ಬೆಳವಣಿಗೆಯನ್ನು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ. ಸಮರಖಂಡ್‌ನ ಚಾರಿತ್ರಿಕ ಉಜ್ಬೇಕ್ ನಗರದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗ ಸಭೆಯಲ್ಲಿ ಪಾಲ್ಗೊಂಡ ಭಾರತೀಯ ನಿಯೋಗದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘‘ಮುಂದಿನ 2022-23ರಲ್ಲಿ ವಾರಣಾಸಿಯನ್ನು ಮೊದಲು ಬಾರಿಗೆ ಎಸ್‌ಸಿಒನ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ರಾಜಧಾನಿಯಾಗಿ ಅನುಮೋದನೆ ನೀಡಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ’’ ಎಂದು ಕ್ವಾತ್ರಾ ತಿಳಿಸಿದ್ದಾರೆ.
ಇದು ಐತಿಹಾಸಿಕ ಮನ್ನಣೆಗೆ ಯೋಗ್ಯವಾಗಿದೆ. ಇದು ಭಾರತ ಹಾಗೂ ಎಸ್‌ಸಿಒ ರಾಷ್ಟ್ರಗಳ ಜನರು ಹಾಗೂ ಭಾರತದ ಜನರ ನಡುವಿನ ಮಹಾನ್ ಸಂಸ್ಕೃತಿ ಹಾಗೂ ಬಾಂಧವ್ಯದ ಬಾಗಿಲನ್ನು ತೆರೆಯಲಿದೆ ಎಂದು ಅವರು ಹೇಳಿದ್ದಾರೆ.
ವಾರಣಾಸಿಗೆ ಈ ಮಾನ್ಯತೆ ದೊರಕಿರುವುದನ್ನು ಸಂಭ್ರಮಿಸಲು ಉತ್ತರಪ್ರದೇಶ ಸರಕಾರ ಕೇಂದ್ರ ಸರಕಾರದ ಸಂಯೋಜನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ನೇತೃತ್ವದಲ್ಲಿ ಸ್ಟಾರ್ಟ್ ಅಪ್ ಹಾಗೂ ಆವಿಷ್ಕಾರಕ್ಕೆ ವಿಶೇಷ ಕಾರ್ಯಕಾರಿ ಗುಂಪೊಂದನ್ನು ರೂಪಿಸಲು ಕೂಡ ಎಸ್‌ಸಿಒ ನಿರ್ಧರಿಸಿದೆ. ಭಾರತ ಇದರ ಖಾಯಂ ಸದಸ್ಯನಾಗಿರಲಿದೆ. ಬೆಲುರಾಸ್ ಹಾಗೂ ಇರಾನ್‌ಗೆ ಎಸ್‌ಸಿಒನ ಶಾಶ್ವತ ಸದಸ್ಯತ್ವ ನೀಡಲು ಕೂಡ ಶೃಂಗ ಸಭೆ ನಿರ್ಧರಿಸಿದೆ ಎಂದು ಕ್ವಾತ್ರಾ ಹೇಳಿದ್ದಾರೆ.
2001ರಲ್ಲಿ ಶಾಂಘೈ ಶೃಂಗ ಸಭೆಯಲ್ಲಿ ರಶ್ಯ, ಚೀನಾ, ದಿ ಕಿರ್ಗಿಝ್ ರಿಪಬ್ಲಿಕ್, ಕಝಖಸ್ಥಾನ್, ತಜಿಕಿಸ್ಥಾನ್, ಉಜ್ಬೇಕಿಸ್ಥಾನ್‌ನ ಅಧ್ಯಕ್ಷರು ಎಸ್‌ಸಿಒ ಅನ್ನು ಸ್ಥಾಪಿಸಿದ್ದರು. ಒಂದು ವರ್ಷದ ಬಳಿಕ ಇದು ಅತಿ ದೊಡ್ಡ ಪ್ರಾದೇಶಿಕವಾದ ಅಂತಾರಾಷ್ಟ್ರೀಯ ಸಂಘಟನೆಯಾಗಿ ಹೊರ ಹೊಮ್ಮಿದೆ. ಭಾರತ ಹಾಗೂ ಪಾಕಿಸ್ತಾನ 2017ರಿಂದ ಇದರ ಶಾಶ್ವತ ಸದಸ್ಯರು.