×
Ad

ಪ್ರಧಾನಿ ಜನ್ಮ ದಿನವನ್ನು‘‘ರಾಷ್ಟ್ರೀಯ ನಿರುದ್ಯೋಗ ದಿನ’’ವನ್ನಾಗಿ ಆಚರಿಸಲಾಗುತ್ತಿದೆ: ಕಾಂಗ್ರೆಸ್

Update: 2022-09-17 23:16 IST

ಹೊಸದಿಲ್ಲಿ, ಸೆ. 17: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವುದರಿಂದ ಯುವ ಸಮುದಾಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ‘‘ರಾಷ್ಟ್ರೀಯ ನಿರುದ್ಯೋಗ ದಿನ’’ವನ್ನಾಗಿ ಆಚರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. ಯುವ ಜನರಿಗೆ ಭರವಸೆ ನೀಡಿದಂತೆ ಉದ್ಯೋಗ ಒದಗಿಸುವಂತೆ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 72 ಜನ್ಮದಿನವಾದ ಶನಿವಾರ ಕಾಂಗ್ರೆಸ್ ಶುಭಾಷಯ ಕೋರಿದೆ. ಅಲ್ಲದೆ ಅವರು ಆರೋಗ್ಯಯುತರಾಗಿ ದೀರ್ಘ ಕಾಲ ಬಾಳಲಿ ಎಂದು ಹಾರೈಸಿದೆ. ‘‘ಅವರ ವಿರುದ್ಧ ನಮ್ಮ ಸೈದ್ಧಾಂತಿಕ ಹಾಗೂ ರಾಜಕೀಯ ಹೋರಾಟ ಮುಂದುವರಿಯಲಿದೆ. 

ನಮ್ಮ ವಿರುದ್ಧದ ಅವರ ವೈಯುಕ್ತಿಕ ದ್ವೇಷ ತೀವ್ರಗೊಳ್ಳುತ್ತಿದೆ. ಆದರೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ 72 ಜನ್ಮ ದಿನಚಾರಣೆಯಾದ ಇಂದು ಶುಭ ಹಾರೈಸುತ್ತೇವೆ’’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ. 

ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, ಭಾರತದ ಪ್ರಧಾನಿಗಳ ಜನ್ಮ ದಿನವನ್ನು ಯಾವಾಗಲು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

‘‘ಮಕ್ಕಳ ಬಗ್ಗೆ ಪ್ರೀತಿ ತೋರಿದ ನೆಹರೂ ಜಿ  ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ,  ಇಂದಿರಾ ಜಿ  ಅವರ ಜನ್ಮ ದಿನವನ್ನು ಕೋಮು ಸಾಮರಸ್ಯ ದಿನವಾಗಿ,  ರಾಜೀವ್ ಗಾಂಧಿ ಅವರ ಜನ್ಮ ದಿನವನ್ನು ಸದ್ಭಾವನಾ ದಿವಸವಾಗಿ ಆಚರಿಸಲಾಗುತ್ತಿದೆ’’ ಎಂದು ಅವರು ಹೇಳಿದರು.

ಡಿಸೆಂಬರ್‌ನಲ್ಲಿ ಬರುವ ಅಟಲ್ ಜಿ ಅವರು ಜನ್ಮ ದಿನವನ್ನು ಕೂಡ ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತಿದೆ. ಆದರೆ, ಮೋದಿ ಅವರ ಜನ್ಮ ದಿನವನ್ನು ಈ ದೇಶದ ಯುವ ಸಮುದಾಯ ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸುತ್ತಿರುವುದು ನೋವು ತಂದಿದೆ ಎಂದು ಶ್ರೀನಾಥೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News