ಬಿಹಾರ : ಕಸ್ಟಡಿ ಸಾವಿನ ಬಳಿಕ ಉದ್ರಿಕ್ತ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ; 7 ಪೊಲೀಸರಿಗೆ ಗಾಯ

Update: 2022-09-18 10:58 GMT

ಕಟಿಹಾರ್: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತ ಗ್ರಾಮಸ್ಥರು ಠಾಣೆಯ ಮೇಲೆ ದಾಳಿ ಮಾಡಿದ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಶನಿವಾರ ನಡೆಸಿದೆ. ಘಟನೆಯಲ್ಲಿ ಏಳು ಮಂದಿ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರಾಣಪುರ ಪೊಲೀಸ್ ಠಾಣೆಯ ಲಾಕಪ್‍ನಲ್ಲಿ 40 ವರ್ಷ ವಯಸ್ಸಿನ ಪ್ರಮೋದ್ ಕುಮಾರ್ ಸಿಂಗ್ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದರು. ಆವರಣದಲ್ಲಿದ್ದ ವಾಹನಗಳನ್ನು ಜಖಂಗೊಳಿಸಿದರು. ಗ್ರಾಮಸ್ಥರು ದಾಳಿ ನಡೆಸಿದ ವೇಳೆ ಏಳು ಮಂದಿ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡರು. ಪಾನ ನಿಷೇಧ ಇರುವ ಬಿಹಾರದಲ್ಲಿ ಮದ್ಯದ ಬಾಟಲಿ ಹೊಂದಿದ್ದ ಆರೋಪದಲ್ಲಿ ಸಿಂಗ್ ಅವರನ್ನು ವಿಚಾರಣೆಗೆ ಕರೆ ತರಲಾಗಿತ್ತು.

ಗಾಯಗೊಂಡ ಇಬ್ಬರು ಠಾಣಾಧಿಕಾರಿಗಳನ್ನು ಪ್ರಾಣಪುರ ಠಾಣೆಯ ಮನಿತೋಷ್ ಕುಮಾರ್ ಮತ್ತು ದಂಡಕ್ಹೋರಾ ಠಾಣೆಯ ಶೈಲೇಶ್ ಕುಮಾರ್ ಎಂದು ಗುರುತಿಸಲಾಗಿದೆ.

"ಎಲ್ಲ ಗಾಯಾಳು ಪೊಲೀಸರನ್ನು ಕಟಿಹಾರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಪ್ರಭಾರ ಎಸ್ಪಿ ದಯಾ ಶಂಕರ್ ಹೇಳಿದ್ದಾರೆ.

"ಬಂಧಿತ ಸಿಂಗ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ" ಎನ್ನುವುದು ಶಂಕರ್ ಅವರ ಪ್ರತಿಪಾದನೆ. ಸಿಂಗ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಬಡಿಗೆ ಮತ್ತು ಕಬ್ಬಿಣದ ರಾಡ್‍ಗಳೊಂದಿಗೆ ಆಗಮಿಸಿದ ಗ್ರಾಮಸ್ಥರು ಪೊಲೀಸರ ಮೇಲೆ ದಾಳಿ ನಡೆಸಿದರು ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News