ಸೇತುವೆಯಿಂದ ನದಿಗೆ ಉರುಳಿದ ಬಸ್: ಎಂಟು ಮಂದಿ ಮೃತ್ಯು

Update: 2022-09-18 04:10 GMT

ರಾಂಚಿ: ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯಲ್ಲಿ ಸುಮಾರು 50 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆಯಿಂದ ಕೆಳಗೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ.

ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ಆಗಮಿಸುತ್ತಿದ್ದ ಬಸ್, ತತಿಜಾರಿಯಾ ಠಾಣೆ ವ್ಯಾಪ್ತಿಯಲ್ಲಿ ಸೇತುವೆಯ ರೈಲಿಂಗ್ ಮುರಿದು, ಸಿವಾನ್ನೆ ನದಿಯ ಒಣ ಭಾಗಕ್ಕೆ ಬಿದ್ದಿತು ಎಂದು ಎಸ್ಪಿ ಮನೋಜ್ ರತನ್ ಚೋಟೆ ಹೇಳಿದ್ದಾರೆ.

ಹಜಾರಿಬಾಗ್‍ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಶನಿವಾರ ಸಂಜೆ ಈ ದುರಂತ ಸಂಭವಿಸಿದ್ದು, ಆರು ಮಂದಿ ಮಹಿಳೆಯರು ಮತ್ತು ಇಬ್ಬರು ಪುರುಷರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಬಸ್ಸಿನ ಅವಶೇಷದಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ಹೊರಕ್ಕೆಳೆಯುವ ಪ್ರಯತ್ನ ನಡೆದಿದೆ ಎಂದು ಅವರು ವಿವರಿಸಿದ್ದಾರೆ.

ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇತರ ನಾಲ್ಕು ಮಂದಿ ಹಜಾರಿಬಾಗ್ ಸದಾರ್ ಆಸ್ಪತ್ರೆಗೆ ಒಯ್ಯುವ ವೇಳೆ ಮೃತಪಟ್ಟಿದ್ದಾರೆ. ಕೆಲ ಮಂದಿಗೆ ತೀವ್ರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಉತ್ತಮ ಚಿಕಿತ್ಸೆಗಾಗಿ ಗಂಭೀರವಾಗಿ ಗಾಯಗೊಂಡಿರುವವರನ್ನು ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News