×
Ad

ಉ.ಪ್ರದೇಶ | ಮತಾಂತರ ವಿರೋಧಿ ಕಾಯ್ದೆ: ಮೊದಲ ಪ್ರಕರಣದಲ್ಲಿ ವ್ಯಕ್ತಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ

Update: 2022-09-18 21:40 IST

ಲಕ್ನೋ, ಸೆ. 18: ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಉತ್ತರಪ್ರದೇಶ ನ್ಯಾಯಾಲಯ ಶನಿವಾರ ೨೬ ವರ್ಷದ ವ್ಯಕ್ತಿಯೋರ್ವನಿಗೆ ೫ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ರಾಜ್ಯದಲ್ಲಿ ಈ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡುತ್ತಿರುವ ಮೊದಲ ಪ್ರಕರಣ ಇದಾಗಿದೆ.

ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಪ್ಝಲ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಳೆದ ವರ್ಷ ಎಪ್ರಿಲ್‌ನಲ್ಲಿ ಮತಾಂತರ ವಿರೋಧಿ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.  ಈತ ಅಮ್ರೋಹ ಜಿಲ್ಲೆಯಿಂದ ೧೬ ವರ್ಷದ ಬಾಲಕಿಯನ್ನು ಅಪಹರಣಗೈದು ಮತಾಂತರಗೊಳಿಸಿದ ಆರೋಪಕ್ಕೆ ಒಳಗಾಗಿದ್ದ. ಬಾಲಕಿ ಅನಂತರ ಹೊಸದಿಲ್ಲಿಯಲ್ಲಿ ಪತ್ತೆಯಾಗಿದ್ದಳು.

ಪ್ರಕರಣದ ಬಗ್ಗೆ ಶನಿವಾರ ಮಾತನಾಡಿದ ವಿಶೇಷ ನ್ಯಾಯವಾದಿ ಬಸಂತ್ ಸಿಂಗ್ ಸೈನಿ ಅವರು, ಅಫ್ಝಲ್ ತನ್ನನ್ನು ಅರ್ಮಾನ್ ಕೊಹ್ಲಿ ಎಂದು ಬಾಲಕಿಯಲ್ಲಿ ಪರಿಚಯಿಸಿಕೊಂಡಿದ್ದ. ಆತನ ನಿಜವಾದ ಗುರುತು ಆ ಮೇಲೆ ಬೆಳಕಿಗೆ ಬಂತು. ನ್ಯಾಯಾಲಯ ಒಟ್ಟು ೭ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ನಡೆಸಿತು ಎಂದಿದ್ದಾರೆ.

ಅಪ್ಝಲ್ ಜಾಮೀನಿನಲ್ಲಿ ಹೊರಗಿದ್ದ. ನ್ಯಾಯಾಲಯದ ಆದೇಶದ ಬಳಿಕ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಡಿಜಿಪಿ ಅಶುತೋಷ್ ಪಾಂಡೆ ಅವರು ಹೇಳಿದ್ದಾರೆ.

ಅಪ್ಝಲ್ ಗಿಡ ಖರೀದಿಸಲು ನರ್ಸರಿಗೆ ಆಗಾಗ ಬರುತ್ತಿದ್ದ. ಅಲ್ಲಿದ್ದ ತನ್ನ ಪುತ್ರಿಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.

ಪೊಲೀಸರು ಆರಂಭದಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆದರೆ, ಬಾಲಕಿಯ ತಂದೆಯ ದೂರಿನಂತೆ ಅನಂತರ ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News