ಉತ್ತರ ಪ್ರದೇಶ: ಹತ್ಯೆಯಾದ ಸ್ಥಿತಿಯಲ್ಲಿ ದಲಿತ ತಾಯಿ-ಮಗಳ ಮೃತದೇಹ ಪತ್ತೆ
ಅಮ್ರೋಹ ಸೆ. 18: ದಲಿತ ಮಹಿಳೆ ಹಾಗೂ ಅವರ ಅಪ್ರಾಪ್ತ ಪುತ್ರಿಯ ಮೃತದೇಹ ಹತ್ಯೆಯಾದ ಸ್ಥಿತಿಯಲ್ಲಿ ಇಲ್ಲಿನ ಗಜ್ರೌಲ ಪೊಲೀಸ್ ಠಾಣಾ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ರವಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲಿತ ಮಹಿಳೆ ಮನೀಶಾ (32) ಅವರು ಅಪ್ರಾಪ್ತ ಪುತ್ರಿ ಇಶಾ (13)ಳೊಂದಿಗೆ ಗಜ್ರೌಲ ಪೊಲೀಸ್ ಠಾಣಾ ಪ್ರದೇಶದ ಕಂಕಾಥೇರ್‌ನಲ್ಲಿ ವಾಸಿಸುತ್ತಿದ್ದರು. ಅವರ ಪತಿ ಪವನ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪುತ್ರ ಮಾನ್ವಿಕ್ ದೂರದ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಾನೆ.
ಹಾಲು ಮಾರಾಟಗಾರ ರವಿವಾರ ಬೆಳಗ್ಗೆ ಮನೆಯ ಬಾಗಿಲು ತೆರೆದಾಗ ತಾಯಿ ಹಾಗೂ ಮಗಳ ಮೃತದೇಹ ಮಂಚದ ಮೇಲಿತ್ತು. ಅವರ ತಲೆಯಿಂದ ರಕ್ತ ಸೋರುತ್ತಿತ್ತು. ಮೃತದೇಹದ ಸಮೀಪ ಕಲ್ಲಿನ ತುಂಡು ಇತ್ತು. ಅನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಸರ್ಕಲ್ ಅಧಿಕಾರಿ ಅರುಣ್ ಕುಮಾರ್ ಅವರು ತಿಳಿಸಿದ್ದಾರೆ.
ಈ ನಡುವೆ ಕುಟುಂಬದ ಸದಸ್ಯರು ಮಹಿಳೆಯ ಅತ್ತೆ, ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ. ಪವನ್ ರ ಸೊತ್ತು ವಶಪಡಿಸಿಕೊಳ್ಳಲು ಅವರು ಈ ಹತ್ಯೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗಾಗಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.