ಒಡಿಶಾ: ಕಿಯೋಂಜರ್ ಆಸ್ಪತ್ರೆಯಲ್ಲಿ ನಾಲ್ಕು ನವಾಜಾತ ಶಿಶುಗಳ ಸಾವು
ಕಿಯೋಂಜಾರ್(ಒಡಿಶಾ), ಸೆ. 18: ಕಿಯೋಂಜಾರ್ ಜಿಲ್ಲಾ ಕೇಂದ್ರದ ಆಸ್ಪತ್ರೆ (ಡಿಎಚ್‌ಎಚ್)ಯಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ 4 ನವಜಾತ ಶಿಶುಗಳು ಸಾವನ್ನಪ್ಪಿವೆ. ಆಮ್ಲಜನಕದ ಕೊರತೆ ಹಾಗೂ ವೈದ್ಯರ ಅನುಪಸ್ಥಿತಿಯಿಂದ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸೂಕ್ತ ಸಮಯಕ್ಕೆ ಆಮ್ಲಜನಕ ಪೂರೈಸದೇ ಇದ್ದುದರಿಂದ ವಿಶೇಷ ನವಜಾತ ಶಿಶುಗಳ ಪಾಲನಾ ಘಟಕ (ಎಸ್‌ಎನ್‌ಸಿಯು)ದಲ್ಲಿ ದಾಖಲಿಸಲಾಗಿದ್ದ ಶಿಶುಗಳು ಸಾವನ್ನಪ್ಪಿವೆ ಎಂದು ಆರೋಪಿಸಿ ಮಕ್ಕಳ ಹೆತ್ತವರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಆಮ್ಲಜನಕ ಪೂರೈಕೆಯಲ್ಲಿ ಕೊರತೆ ಅಲ್ಲದೆ, ರಾತ್ರಿ ಶಿಶುಗಳ ಆರೋಗ್ಯ ಸ್ಥಿತಿ ಹದಗೆಟ್ಟ ಸಂದರ್ಭ ವೈದ್ಯರು ಇಲ್ಲದೇ ಇದ್ದುದು ಶಿಶುಗಳ ಸಾವಿಗೆ ಕಾರಣ ಎಂದು ಶಿಶುಗಳ ಕುಟುಂಬಿಕರು ಆರೋಪಿಸಿದ್ದಾರೆ.
ಮಕ್ಕಳ ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಉದ್ವಿಗ್ನತೆ ನಿರ್ಮಾಣ ಆಗಿರುವುದರಿಂದ ಜಿಲ್ಲಾ ಮುಖ್ಯ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿ (ಸಿಡಿಎಂ ಹಾಗೂ ಪಿಎಚ್‌ಒ) ಡಾ. ಸುಜಾತಾ ರಾಣಿ ಮಿಶ್ರಾ ಅಧಿಕಾರಿಗಳ ತಂಡದೊಂದಿಗೆ ಆಸ್ಪತ್ರೆಗೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ಶಿಶುಗಳ ಸಾವಿಗೆ ನಿಖರ ಕಾರಣ ತಿಳಿಯಲು ಅವರು ತನಿಖೆಗೆ ಆದೇಶಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಹಾಗೂ ವೈದ್ಯರ ಅನುಪಸ್ಥಿತಿಯ ಆರೋಪವನ್ನು ನಿರಾಕರಿಸಿರುವ ಅವರು, ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ 128 ಶಿಶುಗಳು ದಾಖಲಾಗಿದ್ದವು. ಅವುಗಳಲ್ಲಿ 13 ಶಿಶುಗಳು ಜನನ ಸಂಬಂಧಿ ಸಂಕೀರ್ಣತೆ ಹಾಗೂ ಕಡಿಮೆ ತೂಕದ ಕಾರಣದಿಂದ ಮೃತಪಟ್ಟವು ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಕೂಡಲೇ ವರದಿ ಸಲ್ಲಿಸುವಂತೆ ಕಿಯೋಂಜಾರ್ ಜಿಲ್ಲಾಡಳಿತಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ನಬಾ ಕಿಶೋರ್ ದಾಸ್ ಅವರು ನಿರ್ದೇಶಿಸಿದ್ದಾರೆ.