×
Ad

ನಮೀಬಿಯಾದಿಂದ ಚೀತಾಗಳನ್ನು ಕರೆತಂದ ವಿಮಾನವೆಂದು ವೈರಲ್‌ ಆದ ಚಿತ್ರದ ಹಿಂದಿನ ವಾಸ್ತವಾಂಶವೇನು?

Update: 2022-09-18 22:58 IST
photo- twitter

ಹೊಸದಿಲ್ಲಿ: 1952 ರಲ್ಲಿ ಭಾರತದಿಂದ ಅಳಿವು ಹೊಂದಿದ ಏಳು ದಶಕಗಳ ಬಳಿಕ ಆಫ್ರಿಕಾದ ನಮೀಬಿಯಾ ದೇಶದಿಂದ ಎಂಟು ಚೀತಾಗಳು ಭಾರತಕ್ಕೆ ಬಂದು ತಲುಪಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರವಧಿಯಲ್ಲಿ ಈ ಚೀತಾಗಳನ್ನು ತರುವ ಪ್ರಯತ್ನಗಳು ನಡೆದಿದ್ದರಾದರೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರ ಇದನ್ನು ಬಹಳ ಮುತುವರ್ಜಿಯಿಂದ ಪರಿಗಣಿಸಿದೆ. 

ನಮೀಬಿಯಾದಿಂದ ವಿಶೇಷ ಕಾರ್ಗೋ ಬೋಯಿಂಗ್ ವಿಮಾನದಲ್ಲಿ ಸೆಪ್ಟೆಂಬರ್ 17ರಂದು ಗ್ವಾಲಿಯರ್‌ಗೆ ಇಳಿದ ಬಳಿಕ, ಅವುಗಳನ್ನು ಹೆಲಿಕಾಪ್ಟರ್‌ನಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭಾರತದಲ್ಲಿ ಚಿರತೆಗಳ ಪರಿಚಯವನ್ನು ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಇದು ಅರಣ್ಯದ ಮಾಂಸಹಾರಿ ಪ್ರಾಣಿಗಳ ಮೊದಲ ಅಂತರ್-ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ಚಿರತೆಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಧನೆಯನ್ನು ಶ್ಲಾಘಿಸಿದ್ದಾರೆ, ವಿಶೇಷವಾಗಿ ಸ್ಥಳಾಂತರವನ್ನು ಮಾಡುವ ವಿಧಾನವನ್ನು ಶ್ಲಾಘಿಸಿದ್ದಾರೆ. ANI, hindustan times ನಂತಹ ಸುದ್ದಿ ಸಂಸ್ಥೆಗಳು ಸೇರಿದಂತೆ ಹಲವಾರು ಬಳಕೆದಾರರು ಈ ಯೋಜನೆಗಾಗಿ ಬಳಸಿದ ವಿಶೇಷ ವಿಮಾನವೆಂದು ಹುಲಿಯ ಮುಖದ ಚಿತ್ರ ಬರೆದಿರುವ ವಿಮಾನದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಯೋಜನೆಗಾಗಿ ಭಾರತೀಯ ವಿಮಾನಕ್ಕೆ ಚಿರತೆಯ ಚಿತ್ರವನ್ನು ಪೇಂಟ್‌ ಮಾಡಲಾಗಿದೆ ಎಂದು ಹಲವರು ಪ್ರತಿಪಾದಿಸಿದ್ದರು.

ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಬಳಸಲಾಗುತ್ತಿರುವ ವಿಮಾನದ ಮೂಗಿನ ಮೇಲಿನ ಚಿತ್ರದಲ್ಲಿರುವುದು ಹುಲಿಯೇ ಹೊರತು ಚಿರತೆಯಲ್ಲ. ವಿಮಾನವು ಭಾರತೀಯ ಒಡೆತನ ಹೊಂದಿಲ್ಲ ಮತ್ತು ಈ ಸಂದರ್ಭಕ್ಕಾಗಿ ವಿಶೇಷವಾಗಿ ಬಣ್ಣ ಬಳಿಯಲಾಗಿಲ್ಲ ಎಂದು newschecker.in ಸತ್ಯ ಪರಿಶೋಧನೆ ವೇಳೆ ಕಂಡು ಬಂದಿದೆ.
 
ಚಿರತೆ ತರಲು ಹುಲಿಯ ಚಿತ್ರವನ್ನು ಏಕೆ ಚಿತ್ರಿಸಿದ್ದಾರೆ ಎಂಬ ಅನುಮಾನವು ಈ ಚಿತ್ರದ ಹಿಂದಿರುವ ವಾಸ್ತವಾಂಶವನ್ನು ಬಹಿರಂಗಪಡಿಸಿದೆ. ಅಸಲಿಗೆ ಈ ವಿಮಾನದ ಚಿತ್ರವು 2015 ರಲ್ಲೇ ವರದಿಯಾಗಿದ್ದವು. ಸೈಬೀರಿಯನ್ ಟೈಮ್ಸ್, ದಿ ಡೈಲಿ ಮೇಲ್ ಮೊದಲಾದ ಮಾಧ್ಯಮಗಳು 2015 ರಲ್ಲಿ ಮಾಡಿರುವ ವರದಿಯಲ್ಲಿ ಈಗ ವೈರಲ್‌ ಆಗುತ್ತಿರುವ (ಹುಲಿ ಮೂತಿಯ) ವಿಮಾನದ ಚಿತ್ರವು ಕಂಡುಬಂದಿದೆ. 
 
ರಷ್ಯಾದ ವಾಹಕ ಟ್ರಾನ್ಸೇರೋ ಜೂನ್ 2015 ರಲ್ಲಿ ತನ್ನ ದೀರ್ಘ-ಪ್ರಯಾಣದ ಬೋಯಿಂಗ್ 747-400 ವಿಮಾನಗಳಲ್ಲಿ ಹುಲಿ ಮುಖವನ್ನು ಒಳಗೊಂಡ ವಿಶೇಷ ಹೊಸ ಲೈವರಿಯನ್ನು ಅನಾವರಣಗೊಳಿಸಿದೆ ಎಂದು ವರದಿ ಹೇಳಿದೆ.  ಅಮುರ್ ಟೈಗರ್ ಕೇಂದ್ರದ ಸಂರಕ್ಷಣಾ ಕಾರ್ಯವನ್ನು ಉತ್ತೇಜಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. 

ಕೇರಿಂಗ್ ದಿ ಟೈಗರ್ಸ್ ಟುಗೆದರ್‌ಗಾಗಿ ಜೂನ್ 2015 ರಲ್ಲಿ ವಿಮಾನವನ್ನು ವಿಶೇಷ ಬಣ್ಣಗಳಿಂದ ಚಿತ್ರಿಸಲಾಗಿದೆ ಎಂದು   ಟೆರ್ರಾ ಏವಿಯಾ ವೆಬ್‌ಸೈಟ್   ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾಗಿ, ಈ ವಿಮಾನವನ್ನು ಚೀತಾಗಳನ್ನು ಕರೆತರಲು ಭಾರತ ಸರ್ಕಾರ ತಯಾರಿಸಿಲ್ಲವೆಂದು ಸಾಬೀತಾಗಿದೆ ಎಂದು  newschecker.in ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News