×
Ad

ಹಿಂದು ಸಂಘಟನೆಗಳನ್ನು ಬೆಂಬಲಿಸಿದ್ದಕ್ಕೆ ಬೆದರಿಕೆ ಕರೆ ಬಂದಿದೆ ಎಂದು ಸುಳ್ಳು ಹೇಳಿದ ವೈದ್ಯನ ವಿರುದ್ಧ ಪ್ರಕರಣ ದಾಖಲು

Update: 2022-09-19 13:18 IST
ಯತಿ ನರಸಿಂಗಾನಂದ್ ಜೊತೆ ಆರೋಪಿ ವೈದ್ಯ ಅರವಿಂದ ವತ್ಸ್ ಅಕೇಲಾ (Twitter/@zoo_bear)

ಹೊಸದಿಲ್ಲಿ: ಹಿಂದು ಸಂಘಟನೆಗಳನ್ನು(Hindu organisations) ಬೆಂಬಲಿಸಿದ್ದಕ್ಕಾಗಿ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪ್ರಚಾರ ಪಡೆಯುವ ಉದ್ದೇಶದಿಂದ ಸುಳ್ಳು ದೂರು ನೀಡಿದ್ದ ವೈದ್ಯನೊಬ್ಬನ ವಿರುದ್ಧ ಪೊಲೀಸರು ರವಿವಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವೈದ್ಯ ಅರವಿಂದ ವತ್ಸ್ ಅಕೇಲಾ(Dr Arvind Vats Akela) ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಪೊಲೀಸರು ಆರೋಪಿ ವೈದ್ಯನ ಮನೆ ಮತ್ತು ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದಾರೆ ಎಂದು thewire.in ವರದಿ ಮಾಡಿದೆ.

ವೈದ್ಯನಿಗೆ ಅಮೆರಿಕಾ ಮೂಲದ ಸಂಖ್ಯೆಯಿಂದ 'ಹಿಂದುಗಳನ್ನು ಬೆಂಬಲಿಸುವುದನ್ನು ನಿಲ್ಲಿಸಿ ಇಲ್ಲದೇ ಹೋದರೆ ಶಿರಚ್ಛೇದನಗೈಯ್ಯಲಾಗುವುದು' ಎಂದು ಬೆದರಿಕೆ ಬಂದಿದೆ ಎಂದು ವೈದ್ಯ ಅಳುತ್ತಾ ಹೇಳುತ್ತಿರುವ ವಿಚಾರವನ್ನು ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು. ಇಂಡಿಯಾ ಟಿವಿ ವೈದ್ಯನನ್ನು ತನ್ನ ಚರ್ಚಾ ಕಾರ್ಯಕ್ರಮಕ್ಕೂ ಆಹ್ವಾನಿಸಿತ್ತು.

ಸೆಪ್ಟೆಂಬರ್ 9ರಂದು ವೈದ್ಯ ದೂರು ದಾಖಲಿಸಿ ತನಗೆ ವಾಟ್ಸ್ಯಾಪ್ ಕರೆಗಳ ಮೂಲಕ ಅಮೆರಿಕಾ ಸಂಖ್ಯೆಯಿಂದ ಮೂರು ಬೆದರಿಕೆ ಕರೆಗಳು ಬಂದಿದ್ದವು, ಹಿಂದು ಸಂಘಟನೆಗಳನ್ನು ಬೆಂಬಲಿಸುವುದನ್ನು ನಿಲ್ಲಿಸಿ, ಇಲ್ಲದೇ ಹೋದರೆ ಶಿರಚ್ಛೇದನಗೈಯ್ಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿತ್ತು. ಸೆಪ್ಟೆಂಬರ್ 1, 2 ಮತ್ತು 7ರಂದು ರಾತ್ರಿ ಹೊತ್ತು ಕರೆಗಳು ಬಂದಿದ್ದವು ಎಂದು ವೈದ್ಯ ಹೇಳಿದ್ದ.

ಆದರೆ ಪೊಲೀಸರು ತನಿಖೆ ನಡೆಸಿದಾಗ ವೈದ್ಯನ ಒಬ್ಬ ರೋಗಿ ದಿಲ್ಲಿಯ ಮಾಲವೀಯ ನಗರದಿಂದ ಕರೆ ಮಾಡಿದ್ದ ಎಂದು ತಿಳಿದು ಬಂದಿತ್ತು. ಮೇಲಾಗಿ ಈ 23 ವರ್ಷದ ರೋಗಿ, ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ತನ್ನ ಸಮಸ್ಯೆಯನ್ನು ವೈದ್ಯನ ಬಳಿ ವಿವರಿಸಿದ್ದನೇ ಹೊರತು ಬೆದರಿಕೆ ಹಾಕಿರಲಿಲ್ಲ. ಸೆಪ್ಟೆಂಬರ್ 2ರಂದು ಕರೆ ಮಾಡಿದ್ದ ವ್ಯಕ್ತಿ ವಾಟ್ಸ್ಯಾಪ್‍ನಲ್ಲಿ ತನ್ನ ಊದಿದ ಕಾಲುಗಳ ಚಿತ್ರವನ್ನು ವೈದ್ಯನಿಗೆ ಕಳುಹಿಸಿದ್ದ. ರೋಗಿಯು ಇಂಟರ್ನೆಟ್ ಜನರೇಟೆಡ್ ಸಂಖ್ಯೆ ಬಳಸಿದ್ದರಿಂದ ಕರೆ ಸ್ವೀಕರಿಸಿದಾತನಿಗೆ ಅಮೆರಿಕಾದ ಕರೆ ಎಂಬ ಭಾವನೆ ಬಂದಿರಬಹುದೆಂದು ಪೊಲೀಸರು ಹೇಳಿದ್ದಾರೆ.

ಆತನ ವಿರುದ್ಧ ಸೆಕ್ಷನ್ 182 ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿ ವೈದ್ಯ ವಿವಾದಿತ ಹಿಂದುತ್ವ ನಾಯಕ ಯತಿ ನರಸಿಂಗಾನಂದ್ ಜೊತೆಗಿರುವ ಹಾಗೂ  ಆತ ಬಿಜೆಪಿ ಯುವ ಮೋರ್ಚಾದ ಪೋಸ್ಟರ್‍ಗಳಲ್ಲಿರುವ ಹಾಗೂ ಅದರಲ್ಲಿ ಪಶ್ಚಿಮ ಉತ್ತರ ಪ್ರದೇಶದ ಸ್ಥಳೀಯ ಮಾಧ್ಯಮ ಉಸ್ತುವಾರಿ ಎಂದು ಪರಿಚಯಿಸುವ ಪೋಸ್ಟ್‍ಗಳನ್ನು ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮುಹಮ್ಮದ್ ಝುಬೈರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News