ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಚುನಾವಣೆ: ಶಶಿ ತರೂರು vs ಅಶೋಕ್‌ ಗೆಹ್ಲೋಟ್‌ ನಡುವೆ ಹಣಾಹಣಿ?

Update: 2022-09-19 16:45 GMT
Photo: Twitter/ShashiTharoor&AshikGehlot

ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ಮೂಲಗಳ ಪ್ರಕಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತರೂರ್‌ ಗೆ ಸ್ಪರ್ಧಿಯಾಗಲಿದ್ದಾರೆ ಎಂದು ndtv.com ವರದಿ ಮಾಡಿದೆ.

ಕಾಂಗ್ರೆಸ್‌ನ ಜಿ-23 ಅಥವಾ 23 ನಾಯಕರ ಗುಂಪಿನ ಪ್ರಮುಖ ಸದಸ್ಯರಾಗಿರುವ ಶಶಿ ತರೂರ್, 2020 ರಲ್ಲಿ ಸೋನಿಯಾ ಗಾಂಧಿಗೆ ಆಂತರಿಕ ಸುಧಾರಣೆಗಳಿಗೆ ಕರೆ ನೀಡುವಂತೆ ಪತ್ರ ಬರೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವು ನೀಡಿದ್ದರು.

ತರೂರ್ ಅವರು ಕಾಂಗ್ರೆಸ್‌ ಅಧ್ಯಕ್ಷಗಾದಿಗೆ ಅಖಾಡಕ್ಕೆ ಇಳಿದ ಮೊದಲಿಗರಾಗಿದ್ದರೂ, ಅವರು ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿಯಲ್ಲ ಎಂದು ಮೂಲಗಳು ಹೇಳಿವೆ. ಎರಡು ದಶಕಗಳಲ್ಲಿ ಗಾಂಧಿಯೇತರರೊಬ್ಬರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು.

ಗಾಂಧಿ ಕುಟುಂಬದ ನಿಷ್ಠಾವಂತರಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಗಾಂಧಿ ಪರಿವಾರ ಹಾಗೂ ಗಾಂಧಿ ಕುಟುಂಬದ ನಿಷ್ಟಾವಂತರು ಬೆಂಬಲಿಸುವ ಸಾಧ್ಯತೆ ಇದ್ದು,  ಅಕ್ಟೋಬರ್ 25 ರಂದು ಗೆಹ್ಲೋಟ್ ದಿಲ್ಲಿಗೆ ಭೇಟಿ ನೀಡಲಿದ್ದಾರೆ ಮತ್ತು ಮರುದಿನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News