ಹೈಕೋರ್ಟ್ ಪ್ರಕರಣ ರದ್ದುಗೊಳಿಸಿದ ವಿರುದ್ಧ ಐಟಿ ಅರ್ಜಿ: ಡಿ.ಕೆ. ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2022-09-19 17:47 GMT

ಹೊಸದಿಲ್ಲಿ, ಸೆ. 19: ತೆರಿಗೆ ವಂಚನೆ ಪ್ರಕರಣಗಳಲ್ಲಿ ದೋಷಮುಕ್ತಗೊಳಿಸಿದ ಹೈಕೋರ್ಟ್‌ನ ನಿರ್ಧಾರದ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಮನವಿಯ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಕಾಂಗ್ರೆಸ್ ವರಿಷ್ಠ ಡಿ.ಕೆ. ಶಿವಕುಮಾರ್‌ಗೆ ನೋಟಿಸು ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಕಣ್ಣನ್ ಹಾಗೂ ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಕರ್ನಾಟಕ ಉಚ್ಚ ನ್ಯಾಯಾಲಯದ ಕೆಲವು ಅಭಿಪ್ರಾಯಕ್ಕೆ ತಡೆ ನೀಡಿದೆ.

ಈ ಪ್ರಕರಣದ ಕುರಿತಂತೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ತಿಳಿಸಿದೆ. ಅದನ್ನು 6 ವಾರಗಳ ಬಳಿಕ ಪರಿಗಣಿಸಲಾಗುವುದು ಎಂದು ಅದು ಹೇಳಿದೆ. ಅಧಿಕಾರಿ ಮಾಡಿದ ಕ್ರಿಮಿನಲ್ ದೂರನ್ನು ಅರಿವಿಗೆ ತೆಗೆದುಕೊಳ್ಳಲು ವಿಶೇಷ ನ್ಯಾಯಾಲಯದ ಅಧಿಕಾರದ ಕುರಿತ ಉಚ್ಚ ನ್ಯಾಯಾಲಯದ ಅಭಿಪ್ರಾಯಕ್ಕೆ ಮಧ್ಯಂತರ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಆದರೆ, ಹೊಸ ಮೊಕದ್ದಮೆ ದಾಖಲಿಸಲು ಆದಾಯ ತೆರಿಗೆ ಇಲಾಖೆ ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿವಾದಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹ್ಟಗಿ, ಸಿ.ಎ. ಸುಂದರಂ ಹಾಗೂ ಆದಾಯ ತೆರಿಗೆ ಇಲಾಖೆ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅವರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News