ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆ ನಡೆಸಿದ ಐಪಿಎಸ್ ಅಧಿಕಾರಿಯ ವಜಾ ಆದೇಶಕ್ಕೆ ಸುಪ್ರೀಂ ತಡೆ

Update: 2022-09-19 17:49 GMT

ಹೊಸದಿಲ್ಲಿ, ಸೆ. 19: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ಅವರ ವಜಾ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಒಂದು ವಾರಗಳ ತಡೆ ವಿಧಿಸಿದೆ.

ಸೆಪ್ಟಂಬರ್ 30ರಂದು ನಿವೃತ್ತರಾಗುವುದಕ್ಕಿಂತ ತಿಂಗಳ ಮೊದಲು ಆಗಸ್ಟ್ 30ರಂದು ಕೇಂದ್ರ ಗೃಹ ಸಚಿವಾಲಯ ನೀಡಿದ ವಜಾ ಆದೇಶವನ್ನು ಪ್ರಶ್ನಿಸಿ ವರ್ಮಾ ಅವರು ಕಳೆದ ವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಜಾ ಆದೇಶದ ಅನುಷ್ಠಾನ ವರ್ಮಾ ಅವರನ್ನು ಪಿಂಚಣಿ ಹಾಗೂ ನಿವೃತ್ತಿಯ ಬಳಿಕದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತದೆ.

ವರ್ಮಾ ಅವರನ್ನು ವಜಾಗೊಳಿಸಲು ಗೃಹ ಸಚಿವಾಲಯ ರೂಪಿಸಿದ ಶಿಸ್ತು ಸಮಿತಿಗೆ 2021 ಸೆಪ್ಟಂಬರ್‌ನಲ್ಲಿ ಅನುಮತಿ ನೀಡಲಾಗಿತ್ತು. ಇದರ ವಿರುದ್ಧ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ನಡೆಸಿತ್ತು.

ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ, ವರ್ಮಾ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಮುಂದಿರುವ ಅರ್ಜಿಯನ್ನು ತಿದ್ದುಪಡಿ ಮಾಡಬಹುದು ಅಥವಾ ವಜಾ ಆದೇಶವನ್ನು ಕೇಂದ್ರ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಬಹುದು ಎಂದಿದೆ. ವಜಾ ಆದೇಶಕ್ಕೆ ನೀಡಲಾದ ತಡೆಯನ್ನು ಒಂದು ವಾರಕ್ಕಿಂತ ಹೆಚ್ಚು ವಿಸ್ತರಿಸಬೇಕೇ? ಎಂಬುದನ್ನು ದಿಲ್ಲಿ ಉಚ್ಚ ನ್ಯಾಯಾಲಯ ನಿರ್ಧರಿಸಲಿದೆ ಎಂದು ನ್ಯಾಯಾಧೀಶರು ಹೇಳಿದರು.

ವರ್ಮಾ ವಿರುದ್ಧದ ಆರೋಪ ಇಲಾಖೆಯ ವಿಚಾರಣೆಯಲ್ಲಿ ಸಾಬೀತಾದ ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಸ್ತು ಪ್ರಾಧಿಕಾರ ನಿರ್ಧರಿಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಚ್ಚ ನ್ಯಾಯಾಲಯಕ್ಕೆ ಸೆಪ್ಟಂಬರ್ 6ರಂದು ತಿಳಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News