×
Ad

ರಹಸ್ಯ ದೇಣಿಗೆಯನ್ನು ಸುಪ್ರೀಂ ಕೋರ್ಟ್ ಕೊನೆಗೊಳಿಸೀತೇ?

Update: 2022-09-20 12:18 IST

ಚುನಾವಣಾ ಬಾಂಡ್‌ಗಳು ಬಂದು ಈಗ ಐದು ವರ್ಷಗಳಿಗೂ ಹೆಚ್ಚಿನ ಸಮಯವಾಗಿದೆ. ಭಾರತದ ಚುನಾವಣಾ ದೇಣಿಗೆಯು ಈಗ ‘ಸುಧಾರಣಾ’ ಶಕೆಗಿಂತ ಮೊದಲು ಇದ್ಧ ಸ್ಥಿತಿಗಿಂತಲೂ ಹೆಚ್ಚು ಕೆಟ್ಟದಾಗಿದೆ. ತನ್ನ ಅತಿ ಹೆಚ್ಚು ಗೌರವಾನ್ವಿತ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟತೆಯನ್ನು ತರುತ್ತದೆ ಹಾಗೂ ಈ ಪ್ರಕ್ರಿಯೆಯಲ್ಲಿ ತನ್ನ ನೈಜ ವ್ಯಕ್ತಿತ್ವವನ್ನು ಮರುಪಡೆದುಕೊಳ್ಳುತ್ತದೆ ಎಂಬುದಾಗಿ ಭಾರತ ಭಾವಿಸಬಹುದೇ?

ರಾಜಕೀಯ ಭ್ರಷ್ಟಾಚಾರದ ತಳದಲ್ಲಿರುವುದು ಚುನಾವಣಾ ದೇಣಿಗೆ. ಅದು ಭಾರತದಲ್ಲಿ, 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯೊಂದಿಗೆ ಆರಂಭಗೊಂಡಿತು. ಅದಾದ ಬಳಿಕ ಮೂರು ತಲೆಮಾರುಗಳೇ ಕಳೆದಿವೆ. ಆದರೆ, ಈ 65ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ರಾಜಕೀಯ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಭಾರತೀಯರಿಗೆ ಸಾಧ್ಯವಾಗಲಿಲ್ಲ.

ಅಂತಿಮವಾಗಿ, 2017 ಎಪ್ರಿಲ್ 1ರಂದು ಅದನ್ನು ಕಾನೂನುಬದ್ಧಗೊಳಿಸಲಾಯಿತು. ಕೇಂದ್ರ ಬಜೆಟ್‌ನಲ್ಲಿ ಚುನಾವಣಾ ಬಾಂಡ್‌ಗಳು ಜಾರಿಗೊಂಡವು. ಆ ಬಳಿಕ ಐದು ಮಹತ್ವದ ವರ್ಷಗಳು ಉರುಳಿವೆ. ಈ ಅವಧಿಯಲ್ಲಿ ಒಂದು ಕೇಂದ್ರ ಸರಕಾರ ಮತ್ತು ಎರಡು ಡಝನ್ ರಾಜ್ಯ ಸರಕಾರಗಳನ್ನು ಆಯ್ಕೆ ಮಾಡಲಾಗಿದೆ, ಉರುಳಿಸಲಾಗಿದೆ ಮತ್ತು ಮರುಆಯ್ಕೆಮಾಡಲಾಗಿದೆ.

ಮೋದಿ ಸರಕಾರದ ಅನಾಮಧೇಯ ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ಅವಧಿಗೆ ಸ್ಥಗಿತಗೊಂಡಿತ್ತು. ಕೊನೆಗೂ ಅದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ನಿಗದಿಪಡಿಸಿದ್ದು (ಈಗಲೂ ಅದು ಸುಪ್ರೀಂ ಕೋರ್ಟ್‌ನ ರೋಸ್ಟರ್‌ನಲ್ಲಿ ಔಪಚಾರಿಕವಾಗಿ ಕಾಣಿಸಿಕೊಂಡಿಲ್ಲ; ಹಾಗಾಗಿ ನಿಶ್ಚಿತವಾಗಿ ಏನನ್ನೂ ಹೇಳುವಂತಿಲ್ಲ) ಭಾರತಕ್ಕೆ ಕೊನೆಯ ಅವಕಾಶವೊಂದು ಎದುರಾಗಿದೆ. ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಉನ್ನತಾಧಿಕಾರದ ಸುಪ್ರೀಂ ಕೋರ್ಟ್ ಪೀಠವೊಂದು 2019 ಎಪ್ರಿಲ್‌ನಲ್ಲಿ ಮಧ್ಯಂತರ ಆದೇಶವೊಂದನ್ನು ನೀಡಿತು. ಆ ಆದೇಶವನ್ನು ನೋಡುವಾಗ 17ನೇ ಶತಮಾನದ ಕವಿ ಅಲೆಕ್ಸಾಂಡರ್ ಪೋಪ್‌ರ ಕವನವೊಂದರ ಸಾಲು ನೆನಪಾಗುತ್ತದೆ: "Willing to wound, and yet afraid to strike ಎದುರಾಳಿಯನ್ನು ಗಾಯಗೊಳಿಸುವ ಮನಸ್ಸಿದೆ, ಆದರೆ ಹೊಡೆಯಲು ಹೆದರಿಕೆಯಾಗುತ್ತದೆ’’. ಆ ಆದೇಶವು ಅಷ್ಟು ಗೊಂದಲದಿಂದ ಕೂಡಿತ್ತು. ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಸಂಜೀವ್ ಖನ್ನಾ ಆ ಮೂವರು ಸದಸ್ಯರ ನ್ಯಾಯಪೀಠದ ಇತರ ಸದಸ್ಯರಾಗಿದ್ದರು.

ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸುವಾಗ ಯಾವಾಗಲೂ ನಾವು ಎಚ್ಚರಿಕೆಯಿಂದ ಪದಗಳನ್ನು ಬಳಸಬೇಕು. ಅದರಲ್ಲೂ ವಿಶೇಷವಾಗಿ ಈ ಪ್ರಕರಣದಲ್ಲಿ. ಯಾಕೆಂದರೆ, ಪ್ರಕರಣದ ವಿವರವಾದ ವಿಚಾರಣೆಯನ್ನು ಮುಂದಕ್ಕೆ ಕೈಗೆತ್ತಿಕೊಳ್ಳುವುದಾಗಿ ಆ ಮಧ್ಯಂತರ ಆದೇಶವು ಹೇಳಿದ್ದರೂ, ಅದರ ನಿಜವಾದ ಉದ್ದೇಶ ಕಿರಿಕಿರಿ ಮಾಡುತ್ತಿದ್ದ ಹುಳಗಳಿಂದ ತುಂಬಿದ್ದ ಡಬ್ಬಿಯೊಂದನ್ನು ಅನಿರ್ದಿಷ್ಟಾವಧಿವರೆಗೆ ದೂರಕ್ಕೆ ಎಸೆದುಬಿಡುವುದಾಗಿತ್ತು ಎಂದನಿಸುತ್ತದೆ. ಆ ಅನಿರ್ದಿಷ್ಟಾವಧಿಯು ಈಗಾಗಲೇ ಮೂರೂವರೆ ವರ್ಷಗಳನ್ನು ನುಂಗಿದೆ ಹಾಗೂ ಈ ಅವಧಿಯಲ್ಲಿ ಮೂವರು ಮುಖ್ಯ ನ್ಯಾಯಾಧೀಶರು ನಿವೃತ್ತರಾಗಿದ್ದಾರೆ. ಈ ವಿಚಾರಣೆಯು ವೇಗವನ್ನು ಪಡೆದುಕೊಳ್ಳುವ ಹೊತ್ತಿಗೆ, ನಾವು ಐದನೇ ಮುಖ್ಯ ನ್ಯಾಯಾಧೀಶರನ್ನು ನೋಡುತ್ತೇವೋ ಏನೋ!

ನ್ಯಾಯಾಲಯದ ಕೊನೆಯಿಲ್ಲದ ವಿಳಂಬಗಳಿಗೆ ನಾವು ಹೊಂದಿಕೊಂಡಿದ್ದೇವೆ. ಇದು ಬಾಲಿವುಡ್ ಚಿತ್ರಗಳಿಗೆ ವಿಷಯವೂ ಆಗಿದೆ. ನ್ಯಾಯಾಂಗ ವಿಳಂಬಗಳು ಎಷ್ಟು ವ್ಯಾಪಕವಾಗಿವೆ ಮತ್ತು ಅವುಗಳನ್ನು ಸ್ವೀಕರಿಸುವುದು ನಮ್ಮ ಸಂಸ್ಕೃತಿಯಲ್ಲಿ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆ ಎಂದರೆ, ಸನ್ನಿ ಡಿಯೋಲ್‌ರ 1993ರ ಚಿತ್ರ ‘ದಾಮಿನಿ’ಯ ‘‘ತಾರೀಖ್-ಪರ್-ತಾರೀಖ್’’ (ಪದೇ ಪದೇ ಮುಂದೂಡಿಕೆ) ಎಂಬ ಪ್ರಸಿದ್ಧ ಸಾಲನ್ನು ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಬಳಸುತ್ತಾರೆ (ನಿಧಾನ ಗತಿಯಲ್ಲಿ ಸಾಗುವ ಹೈಕೋರ್ಟ್‌ಗಳನ್ನು ತರಾಟೆಗೆ ತೆಗೆದುಕೊಳ್ಳುವಾಗ ಅವರು ಈ ಪದಗಳನ್ನು ಉಲ್ಲೇಖಿಸುತ್ತಾರೆ.)

ಆದರೆ, ಈ ಪ್ರಕರಣವು ಕೇವಲ ಸಾಮಾನ್ಯ ನ್ಯಾಯಾಂಗ ವಿಳಂಬಗಳ ಬಲಿಪಶುವಿನಂತೆ ಕಾಣುವುದಿಲ್ಲ. ಇದು ಅಪಾಯವನ್ನು ನಿವಾರಿಸಿಕೊಳ್ಳುವ ಕ್ರಮದಂತೆ ಗೋಚರಿಸುತ್ತದೆ ಎಂದು ನಾನು ಅತ್ಯಂತ ವಿನಮ್ರತೆ ಮತ್ತು ಗೌರವದಿಂದ ಹೇಳುತ್ತೇನೆ. ‘‘ಅದು ತುಂಬಾ ಗೊಂದಲದಿಂದ ಕೂಡಿದಂತೆ ಕಾಣುತ್ತದೆ, ಅದನ್ನು ಮತ್ತೆ ಎತ್ತಿಕೊಳ್ಳೋಣ’’ ಎಂಬ ಭಾವನೆ ಅಲ್ಲಿ ಇರುವಂತೆ ಕಾಣುತ್ತದೆ.

ಅದೇನಿದ್ದರೂ, 2019ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಹಿಂದಿನ ದಿನ ಹಲವು ರಾಜ್ಯಗಳು ಮತದಾನ ಮಾಡಿದ್ದವು. ನ್ಯಾಯಾಲಯವು ತನ್ನ ಆ ಮಧ್ಯಂತರ ಆದೇಶದಲ್ಲಿ, ಪಾರದರ್ಶಕತೆ ಖಂಡಿತವಾಗಿಯೂ ಇರಬೇಕು ಎಂದು ಹೇಳಿತ್ತು. ಹೌದು, ಅವರು ನಮಗೆ ಪಾರದರ್ಶಕತೆಯ ಉಡುಗೊರೆ ನೀಡಿದರು. ಆದರೆ, ಅದು ಕೇವಲ ಮುಚ್ಚಿದ ಲಕೋಟೆಯ ಪಾರದರ್ಶಕತೆಯಾಗಿತ್ತು.

ಈ ಅನಾಮಧೇಯ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಗಳ ವಿವರಗಳನ್ನು ಪ್ರತಿಯೊಂದು ಪಕ್ಷವು 2019 ಮೇ 30ರ ಒಳಗೆ ಚುನಾವಣಾ ಆಯೋಗಕ್ಕೆ ಮುಚ್ಚಿದ ಲಕೋಟೆಗಳಲ್ಲಿ ನೀಡಬೇಕು ಎಂದು ಮಧ್ಯಂತರ ಆದೇಶದಲ್ಲಿ ನ್ಯಾಯಾಧೀಶರು ಹೇಳಿದರು. ಬಳಿಕ, ಅವುಗಳನ್ನು ಬಹಿರಂಗಗೊಳಿಸಬೇಕೇ, ಯಾವಾಗ ಮತ್ತು ಹೇಗೆ ಬಹಿರಂಗಗೊಳಿಸಬೇಕು ಎನ್ನುವುದನ್ನು ನಿರ್ಧರಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಷಯವಾಗಿತ್ತು. ವಾಸ್ತವವಾಗಿ, ಸುಪ್ರೀಂ ಕೋರ್ಟ್, ಚೆಂಡನ್ನು ಪಕ್ಕದ ಅಂಗಳಕ್ಕೆ ಅಡ್ಡವಾಗಿ ಎಸೆದಿತ್ತು. ಅಂದರೆ ಚುನಾವಣಾ ಆಯೋಗದ ಅಂಗಳಕ್ಕೆ. ಚುನಾವಣಾ ಆಯೋಗವು ಈ ವಿಷಯದಲ್ಲಿ ವೌನವಾಗಿದೆ. ಅವಧಿಪೂರ್ವ ನಿವೃತ್ತಿಗೊಂಡ ನಾಗರಿಕ ಸೇವಾ ಅಧಿಕಾರಿಗಳಾಗಿರುವ ಚುನಾವಣಾ ಆಯುಕ್ತರು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರೇ ಮುಟ್ಟಲು ಹೆದರುವ ವಿಷಯವನ್ನು ಕ್ಷಿಪ್ರವಾಗಿ ಕೈಗೆತ್ತಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.

ಈಗ, ‘ಹೆದರಿಕೆ’ ಎಂದು ಹೇಳಿದರೆ ಒರಟು ಪದ ಆಗುತ್ತದೆ. ಇದನ್ನು ಚೀನಾದ ಮಾಜಿ ಆಡಳಿತಗಾರ ಡೆಂಗ್ ಕ್ಸಿಯಾವೊಪಿಂಗ್ ಆಡಿದ ಮಾತುಗಳನ್ನು ಬಳಸಿ ಭಿನ್ನವಾಗಿ ಹೇಳಬಹುದು ಅನಿಸುತ್ತದೆ. 1988ರಲ್ಲಿ ಬೀಜಿಂಗ್‌ನಲ್ಲಿ ಭಾರತದ ದಿ. ಪ್ರಧಾನಿ ರಾಜೀವ್ ಗಾಂಧಿ ಮತ್ತು ಡೆಂಗ್ ಕ್ಸಿಯಾವೊಪಿಂಗ್ ನಡುವೆ ಶೃಂಗ ಸಮ್ಮೇಳನ ನಡೆಯಿತು. ಉಭಯ ದೇಶಗಳ ನಡುವಿನ ಗಡಿ ವಿವಾದವನ್ನು ದೂರ ಇಡಬೇಕು ಎಂಬ ಇಂಗಿತವನ್ನು ಡೆಂಗ್ ವ್ಯಕ್ತಪಡಿಸಿದರು. ಅದಕ್ಕಾಗಿ ಅವರು ಈ ವಾದವನ್ನು ಮಂಡಿಸಿದರು: ‘‘ಗಡಿಯಷ್ಟು ಸಂಕೀರ್ಣವಾಗಿರುವ ವಿವಾದವೊಂದನ್ನು ಇತ್ಯರ್ಥಪಡಿಸಲು ಬೇಕಾದ ಬುದ್ಧಿವಂತಿಕೆಯನ್ನು ಬಹುಶಃ ನಮ್ಮ ತಲೆಮಾರು ಹೊಂದಿಲ್ಲ. ಹಾಗಾಗಿ, ಈ ವಿವಾದವನ್ನು ಬಗೆಹರಿಸುವ ಕೆಲಸವನ್ನು ಭವಿಷ್ಯದ ಬುದ್ಧಿವಂತ ತಲೆಮಾರಿಗೆ ಬಿಟ್ಟುಬಿಡೋಣ ಹಾಗೂ ನಮಗೆ ಸಾಧ್ಯವಿರುವ ಕ್ಷೇತ್ರಗಳಲ್ಲಿ ಮುಂದುವರಿಯೋಣ’’.

2019 ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶವು ಇದೇ ಯೋಚನೆಯನ್ನು ಹೊಂದಿತ್ತು ಅನಿಸುತ್ತದೆ. ಪ್ರಶ್ನೆಯಿರುವುದು, ಆ ಬುದ್ಧಿವಂತಿಕೆ ಇರುವ ನ್ಯಾಯಾಧೀಶರ ತಲೆಮಾರು ಈಗ ಬಂದಿದೆಯೇ?

2017-18ರ ಬಜೆಟ್‌ನಲ್ಲಿ ಚುನಾವಣಾ ಬಾಂಡ್‌ಗಳನ್ನು ಅರುಣ್ ಜೇಟ್ಲಿ ಸೇರಿಸಿದಾಗಲೂ, ಅದೊಂದು ಆಂಶಿಕ ಸುಧಾರಣೆ ಮಾತ್ರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದರು. ಚುನಾವಣಾ ನಿಧಿಯಿಂದ ಕಪ್ಪುಹಣವನ್ನು ಹೊರಗೆ ತರುವ ನಿಟ್ಟಿನಲ್ಲಿ ಇದೊಂದು ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದರು. ಅದು ಸರಿಯಾದ ವಾದವೂ ಆಗಿತ್ತು. ಯಾಕೆಂದರೆ, ಅಲ್ಲಿಯವರೆಗೆ ಶ್ರೀಮಂತರು, ಕಾರ್ಪೊರೇಟ್ ಸಂಸ್ಥೆಗಳು, ದೊಡ್ಡ ಜಮೀನು ವ್ಯವಹಾರಸ್ಥರು, ಗಣಿಗಾರಿಕೆ ಕುಳಗಳು, ಕ್ರಿಮಿನಲ್‌ಗಳು, ಕಳ್ಳಸಾಗಾಣೆದಾರರು, ವಂಚಕರು- ಹೀಗೆ ಯಾರು ಬೇಕಾದರೂ ಸೂಟ್‌ಕೇಸ್‌ಗಳಲ್ಲಿ ಹಣ ತಂದು ತಮಗೆ ಬೇಕಾದ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಕೊಡಬಹುದಾಗಿತ್ತು. ಈಗ ಅವರಿಗೆ ತಮ್ಮ ಬಿಳಿ ಹಣದಿಂದ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಬಾಂಡ್‌ಗಳನ್ನು ಖರೀದಿಸಲು ಸಾಧ್ಯವಾಗಿದೆ.

ಇದರಲ್ಲಿ ಬಿಳಿ ಹಣವನ್ನು ಬಳಸಲು ಅವರಿಗೆ ಇತರ ಆಮಿಷಗಳೂ ಇದ್ದವು. ಯಾಕೆಂದರೆ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಿಗೆ ತೆರಿಗೆ ಪಾವತಿಸಬೇಕಾಗಿರಲಿಲ್ಲ. ಜೊತೆಗೆ, ತಾವು ಸ್ವೀಕರಿಸಿದ ದೇಣಿಗೆಗಳು ತೆರಿಗೆ ವಿನಾಯಿತಿಗೆ ಅರ್ಹವಾಗಿರುವುದರಿಂದ ಬಿಳಿ ಹಣದಲ್ಲೇ ವ್ಯವಹರಿಸಲು ರಾಜಕೀಯ ವರ್ಗಕ್ಕೆ ಸಾಧ್ಯವಾಯಿತು. ಹಾಗಾಗಿ, ಅದು ಪಾರದರ್ಶಕತೆಯತ್ತ ಇಟ್ಟ ಮೊದಲ ಹೆಜ್ಜೆಯೇನೋ ಆಯಿತು, ಆದರೆ ತಾರ್ಕಿಕವಾಗಿ ಇಡಬೇಕಾಗಿದ್ದ ಎರಡನೇ ಹೆಜ್ಜೆಯನ್ನು ಇಡಲೇ ಇಲ್ಲ. ಹಾಗಾಗಿ, ರೋಗಕ್ಕೆ ಒದಗಿಸಲಾದ ಪರಿಹಾರವು ರೋಗಕ್ಕಿಂತಲೂ ಭೀಕರವಾಯಿತು.

ಚುನಾವಣಾ ಬಾಂಡ್‌ನ ವ್ಯವಸ್ಥೆಯನ್ನು ಹೀಗೆ ವಿವರಿಸಬಹುದು: ಓರ್ವ ದೇಣಿಗೆದಾರ (ಸಾಮಾನ್ಯವಾಗಿ ಒಂದು ಕಾರ್ಪೊರೇಟ್ ಕಂಪೆನಿ) ಭಾರತೀಯ ಸ್ಟೇಟ್‌ಬ್ಯಾಂಕ್‌ಗೆ ಹೋಗಿ ಬೇರರ್ ಚೆಕ್ ಅಥವಾ ಬಾಂಡ್‌ಗೆ ಸಮವಾದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಈ ಬಾಂಡ್‌ಗಳನ್ನು ಅವರು ತಮ್ಮ ಆಯ್ಕೆಯ ಪಕ್ಷಕ್ಕೆ ಕೊಡಬಹುದು. ಆಗ ಆ ಪಕ್ಷವು ಆ ಬಾಂಡ್‌ಗಳನ್ನು ನಿರ್ದಿಷ್ಟ ಬ್ಯಾಂಕ್ ಖಾತೆಯೊಂದಕ್ಕೆ ಜಮೆ ಮಾಡುತ್ತದೆ. ಬಾಂಡ್‌ಗಳನ್ನು ಯಾರಿಗೆ ಕೊಡುತ್ತೇನೆ ಎನ್ನುವುದನ್ನು ದೇಣಿಗೆದಾರ ಯಾರಿಗೂ ಹೇಳಬೇಕಾಗಿಲ್ಲ ಮತ್ತು ತನಗೆ ಅದು ಯಾರು ಕೊಟ್ಟರು ಎನ್ನುವುದನ್ನು ಬಾಂಡ್‌ಗಳನ್ನು ಪಡೆದವರು ಬಹಿರಂಗಪಡಿಸಬೇಕಾಗಿಲ್ಲ.

ಹಾಗಾಗಿ, ಮೊದಲ ಹೆಜ್ಜೆಯು ಚುನಾವಣಾ ನಿಧಿಯನ್ನು ಕಪ್ಪು ಹಣದಿಂದ ಬಿಳಿ ಹಣಕ್ಕೆ ವರ್ಗಾಯಿಸಿತು. ಆದರೆ ಎರಡನೇ ಹೆಜ್ಜೆಯು ಈ ವ್ಯವಹಾರಗಳಿಗೆ ಅನಾಮಧೇಯತ್ವದ ಮುಸುಗನ್ನು ಹೊದ್ದಿತು. ಇಲ್ಲಿ ಆಸಕ್ತ ಗುಂಪುಗಳ ನಡುವೆ ಸಂಪೂರ್ಣ ಮರೆಯಲ್ಲಿ ಹಣ ಹರಿದಾಡುತ್ತದೆ. ಆದರೆ ಯಾರು ಯಾರಿಗೆ ಮತ್ತು ಎಷ್ಟು ಹಣ ಕೊಟ್ಟರು ಎನ್ನುವುದು ಮತದಾರನಿಗೆ ತಿಳಿಯುವುದಿಲ್ಲ. ಯಾವುದಾದರೂ ನಿರ್ಧಾರಗಳು ಇಂತಹ ದೇಣಿಗೆಗಳಿಂದ ಪ್ರಭಾವಿತವಾಗಿರಬಹುದೇ ಎನ್ನುವುದೂ ನಾಗರಿಕರು ಅಥವಾ ದೇಶದ ‘ಸ್ವಾಯತ್ತ’ ಸಂಸ್ಥೆಗಳಿಗೂ ತಿಳಿಯುವುದಿಲ್ಲ. ಹಾಗಾಗಿ, ಯಾವುದೇ ಅನಾಮಧೇಯ ದೇಣಿಗೆಯನ್ನು ಮೂಲತಃ ಲಂಚ ಎಂಬ ಸಂಶಯದಿಂದಲೇ ನೋಡಬೇಕಾಗಿದೆ. ಈಗ ಈ ವ್ಯವಸ್ಥೆಯು ಮೊದಲಿಗಿಂತಲೂ ಕೆಟ್ಟದಾಗಿದೆ. ಸಂಪೂರ್ಣ ಕಾನೂನುಬದ್ಧ ಮತ್ತು ತೆರಿಗೆ ವಿನಾಯಿತಿ ಇರುವ ಚುನಾವಣಾ ಭ್ರಷ್ಟಾಚಾರ.

ಈ ಬಗ್ಗೆ ಇನ್ನೂ ಸ್ವಲ್ಪ ಆಳಕ್ಕೆ ಹೋಗೋಣ. ಯಾರು ಯಾರಿಗೆ ಹಣ ಕೊಡುತ್ತಿದ್ದಾರೆ ಮತ್ತು ಯಾವುದಾದರೂ ನಿರ್ಧಾರಗಳನ್ನು ಈ ದೇಣಿಗೆಗಳಿಗೆ ಪ್ರತಿಯಾಗಿ ತೆಗೆದುಕೊಳ್ಳಲಾಗಿದೆಯೇ ಎನ್ನುವುದು ಮತದಾರನಾಗಿರುವ ನಾಗರಿಕನಿಗೆ ತಿಳಿಯುವುದಿಲ್ಲ.

ಅದೂ ಅಲ್ಲದೆ, ಈ ವ್ಯವಹಾರದ ಬಗ್ಗೆ ಹೊರಗಿನವರಿಗೆ ಏನೂ ತಿಳಿಯುವುದಿಲ್ಲ. ಆದರೆ, ವ್ಯವಸ್ಥೆಗೆ ಎಲ್ಲ ತಿಳಿದಿರುತ್ತದೆ. ಅಷ್ಟಕ್ಕೂ, ಬಾಂಡ್‌ಗಳನ್ನು ಯಾರು ಪಡೆದುಕೊಂಡರು ಅಥವಾ ಯಾವ ರಾಜಕೀಯ ಪಕ್ಷ ಯಾವ ಬಾಂಡ್‌ಗಳನ್ನು ಠೇವಣಿ ಇರಿಸಿತು ಎನ್ನುವುದು ಸರಕಾರಿ ಬ್ಯಾಂಕೊಂದಕ್ಕೆ ನಿಖರವಾಗಿ ತಿಳಿಯುತ್ತದೆ. ನಂತರದ ಕೆಲಸ ಇರುವುದು ಬಾಂಡ್ ಸಂಖ್ಯೆಗಳನ್ನು ಜೋಡಿಸುವ ಸರಳವಾದ ಕೆಲಸ. ಯಾರು ಯಾರ ಸ್ನೇಹಿತ ಎನ್ನುವುದನ್ನು ನಿರ್ಧರಿಸುವುದು ‘ವ್ಯವಸ್ಥೆ’ಗೆ ಇಷ್ಟು ಸುಲಭ! ಹಾಗಾಗಿ, ಯಾರಿಗೆ ಪ್ರತಿಫಲ ನೀಡಬೇಕು ಮತ್ತು ಅಗತ್ಯವಿದ್ದರೆ ಯಾರನ್ನು ಶಿಕ್ಷಿಸಬೇಕು ಎನ್ನುವುದು ಅಧಿಕಾರದಲ್ಲಿರುವ ಸರಕಾರಕ್ಕೆ ಗೊತ್ತು.

ಚುನಾವಣಾ ಭ್ರಷ್ಟಾಚಾರ ವಿರುದ್ಧದ 65 ವರ್ಷಗಳ ಹೋರಾಟವನ್ನು 2017 ಎಪ್ರಿಲ್ 1ರಂದು ಕಳೆದುಕೊಂಡೆವು ಹಾಗೂ ನೂತನ ಚುನಾವಣಾ ಬಾಂಡ್‌ಗಳು ವ್ಯವಸ್ಥೆಯನ್ನು ಶುದ್ಧೀಕರಿಸುವ ಬದಲು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿವೆ ಎಂದು ನಾವು ಯಾಕೆ ಹೇಳುತ್ತೇವೆ ಎನ್ನುವುದು ಈಗ ಎಲ್ಲರಿಗೂ ಅರ್ಥವಾಗಿದೆ.

ರಾಜಕೀಯ ವರ್ಗವು ಏನು ಮಾಡುತ್ತದೆ ಎನ್ನುವುದು ಗೊತ್ತಿದೆ. ಹಾಗಾಗಿ, ಚುನಾವಣೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡುವ ತನ್ನ ಭರವಸೆಯನ್ನು ಬಿಜೆಪಿ ಈಡೇರಿಸುತ್ತದೆ ಎನ್ನುವುದನ್ನು ಯಾರೂ ನಂಬುವುದಿಲ್ಲ. ಸುಪ್ರೀಂ ಕೋರ್ಟ್ ಕೂಡ ಅದನ್ನು ‘ಮುಂದಿನ ಬುದ್ಧಿವಂತ ತಲೆಮಾರಿ’ಗೆ ಬಿಟ್ಟದ್ದು ಅತ್ಯಂತ ನಿರಾಶಾದಾಯಕ ಸಂಗತಿಯಾಗಿದೆ.

ಚುನಾವಣಾ ಬಾಂಡ್‌ಗಳು ಬಂದು ಈಗ ಐದು ವರ್ಷಗಳಿಗೂ ಹೆಚ್ಚಿನ ಸಮಯವಾಗಿದೆ. ಭಾರತದ ಚುನಾವಣಾ ದೇಣಿಗೆಯು ಈಗ ‘ಸುಧಾರಣಾ’ ಶಕೆಗಿಂತ ಮೊದಲು ಇದ್ಧ ಸ್ಥಿತಿಗಿಂತಲೂ ಹೆಚ್ಚು ಕೆಟ್ಟದಾಗಿದೆ. ತನ್ನ ಅತಿ ಹೆಚ್ಚು ಗೌರವಾನ್ವಿತ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟತೆಯನ್ನು ತರುತ್ತದೆ ಹಾಗೂ ಈ ಪ್ರಕ್ರಿಯೆಯಲ್ಲಿ ತನ್ನ ನೈಜ ವ್ಯಕ್ತಿತ್ವವನ್ನು ಮರುಪಡೆದುಕೊಳ್ಳುತ್ತದೆ ಎಂಬುದಾಗಿ ಭಾರತ ಭಾವಿಸಬಹುದೆ?

ಕೃಪೆ: theprint.in

Writer - ಶೇಖರ್ ಗುಪ್ತ

contributor

Editor - ಶೇಖರ್ ಗುಪ್ತ

contributor

Similar News