ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ಉದ್ಘಾಟನೆ
ಉಡುಪಿ, ಸೆ.20: ವಿದ್ಯೆಯನ್ನು ಸ್ಪರ್ಧೆ, ಸವಾಲುಗಳ ಮಧ್ಯೆ ಪಡೆದುಕೊಳ್ಳ ಬೇಕಾದ ಇಂದಿನ ದಿನದಲ್ಲಿ ಕಲಿಕೆಗೆ ಮತ್ತು ಬದುಕಿಗೆ ಪೂರಕವಾದ ಆತ್ಮಸ್ಥೈರ್ಯ ದಂತಹ ಅನೇಕ ಪೂರಕ ಅಂಶಗಳು ರಂಗಚಟುವಟಿಕೆಗಳಿಂದ ಹೆಚ್ಚುತ್ತದೆ ಎಂದು ಅಂಬಲಪಾಡಿ ಜನಾರ್ದನ ಮಹಕಾಳಿ ದೇವಳದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್ ಹೇಳಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸುಮನಸಾ ಕೊಡವೂರು-ಉಡುಪಿ ಆಯೋಜಿಸಲಾದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ತರುಣಾವಸ್ಥೆಯ ವಿದ್ಯಾರ್ಥಿಗಳು ಸಕರಾತ್ಮಕ ಗುಣವನ್ನು ಬೆಳೆಸುವಲ್ಲಿ ಮತ್ತು ಆದರ್ಶ ವಿದ್ಯಾರ್ಥಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ನಾಟಕಗಳು ಮಾಡುತ್ತವೆ. ಅಲ್ಲದೆ ಉತ್ತಮ ಸಂಸ್ಕಾರ ದೊಂದಿಗೆ ಭೌತಿಕ, ಮಾನಸಿಕ ಸದೃಢತೆಗೂ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಉದ್ಯಮಿ ಶೇಖರ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶಿವರಾಜ್ ಎನ್.ಕೆ., ಉದ್ಯಮಿಗಳಾದ ಅನ್ಸಾರ್ ಮಲ್ಪೆ, ಎಎಫ್‌ಟಿ, ಮಲ್ಪೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.
ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ನಾಟಕ ಅಕಾಡೆಮಿ ಸದಸ್ಯರಾದ ಪ್ರದೀಪ್ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು.