ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಮಾಹೆಯಿಂದ ಮೊಬೈಲ್ ಕ್ಲಿನಿಕ್

Update: 2022-09-20 15:19 GMT

ಮಣಿಪಾಲ, ಸೆ.20: ಚೆನ್ನೆನ ಟೇಕ್ ಸೊಲ್ಯೂಶನ್ಸ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಿಂದ ದೊರೆತ ಧನಸಹಾಯ ದಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಮಾನಸಿಕ ಅಸ್ವಸ್ಥರ ಚಿಕಿತ್ಸೆಗಾಗಿ ಮೊಬೈಲ್ ಕ್ಲಿನಿಕ್‌ಗೆ ಚಾಲನೆ ನೀಡಿದೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು ಈ ಕ್ಲಿನಿಕ್‌ಗೆ ಚಾಲನೆ ನೀಡಿದರು.

ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಸುಲಭವಾಗುವಂತೆ, ಅವರಿರುವಲ್ಲೇ ತೆರಳಿ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ಹಾಗೂ ಅವರ ಆಸ್ಪತ್ರೆ ದಾಖಲಾತಿಯನ್ನು ಕನಿಷ್ಠಕ್ಕಿಳಿಸುವ ಗುರಿಯೊಂದಿಗೆ, ಇಂಥವರು ಸಮಾಜದೊಂದಿಗೆ ಹೆಚ್ಚೆಚ್ಚು ಬೆರೆಯಲು ಸಾಧ್ಯವಾಗುವಂತೆ ಮೊಬೈಲ್ ಕ್ಲಿನಿಕ್‌ನ್ನು ಪ್ರಾರಂಭಿಸಲಾಗಿದೆ ಎಂದು ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದರು.

ಮಾನಸಿಕ ಅಸ್ವಸ್ಥರಿಗೆ ನೆರವಾಗುವ ಪ್ರತಿಯೊಂದು ಹೆಜ್ಜೆಯೂ ಅವರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಸಾಗುತ್ತದೆ. ಈ ಸಮುದಾಯಕ್ಕೆ ಸಹಾಯ ಹಸ್ತವನ್ನು ಚಾಚುವ ಗುರಿಯನ್ನು ಹೊಂದಿರುತ್ತದೆ. ನಮ್ಮ ಬದ್ಧತೆ ಅವರ ಬದುಕಿನಲ್ಲಿ ನೇತ್ಯಾತ್ಮಕ ಪರಿಣಾಮವನ್ನು ಬೀರುವಂತಿರುತ್ತದೆ. ಇದಕ್ಕಾಗಿ ನಮ್ಮ ಪ್ರಯತ್ನ ಇನ್ನಷ್ಟು ಮುಂದುವರಿಯಲಿದೆ ಎಂದು ಡಾ.ಬಲ್ಲಾಳ್ ತಿಳಿಸಿದರು.

ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮಾತನಾಡಿ, ಮಾನಸಿಕ ಅಸ್ವಸ್ಥರ ಬದುಕು ಹಾಗೂ ವಾತಾವರಣವನ್ನು ಇನ್ನಷ್ಟು ಉತ್ತಮ ಗೊಳಿಸುವ ಹೊಣೆಗಾರಿಕೆಯೊಂದಿಗೆ ನಾವು ಯಾವತ್ತೂ ಕೆಲಸ ಮಾಡುತ್ತೇವೆ. ಮೊಬೈಲ್ ಕ್ಲಿನಿಕ್ ಮೂಲಕ ಇವರು ಸಕಾಲದಲ್ಲಿ ಬೇಕಾದ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.

ಪ್ರಾಯೋಜಿತ ಕಂಪೆನಿಯ ಅಧಿಕಾರಿ ಡಾ.ಆಯಾಝ್ ಹುಸೇನ್ ಖಾನ್, ಮಾಹೆಯ ಕಾರ್ಪೋರೇಟ್ ರಿಲೇಷನ್ಸ್ ನಿರ್ದೇಶಕ ಡಾ.ರವಿರಾಜ್ ಎನ್.ಎಸ್., ಕೆಎಂಸಿಯ ಸೈಕಾಟ್ರಿ ವಿಭಾಗದ ಪ್ರೊ.ಡಾ.ಪಿಎಸ್‌ವಿಎನ್ ಶರ್ಮ,  ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ವೆಂಕಟ್ರಾಯ ಪ್ರಭು, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಸಿಓಓ ಸಿ.ಜಿ.ಮುತ್ತಣ್ಣ, ಕೆಎಂಸಿಯ ಡೀನ್ ಡಾ.ಶರತ್‌ಕುಮಾರ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News