ಸ್ವಾವಲಂಬಿ ಮಹಿಳೆ ದೇಶದ ಅಭಿವೃದ್ಧಿಯ ದ್ಯೋತಕ: ರೇಣು ಶರ್ಮಾ

Update: 2022-09-20 15:20 GMT

ಮಣಿಪಾಲ, ಸೆ.20: ಸ್ವಾವಲಂಬಿ ಮಹಿಳೆಯರು ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರದ ದ್ಯೋತಕವಾಗಿರು ತ್ತಾರೆ. ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರು ಮನೆಯ ನಿತ್ಯದ ಕೆಲಸಗಳನ್ನು ನಿಭಾಯಿಸುವ ಜೊತೆಗೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೇಕಾದ ಆರ್ಥಿಕ ಬಲವನ್ನೂ ನೀಡುತ್ತಾರೆ ಎಂದು ಕೆನರಾ ಬ್ಯಾಂಕ್ ಉಡುಪಿ ವಲಯ ಕಚೆೇರಿಯ ಡಿಜನಲ್ ಮ್ಯಾನೇಜರ್ ರೇಣು ಶರ್ಮಾ ಹೇಳಿದ್ದಾರೆ.  

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಜ್ಯುಬಿಲಿ ಎಜ್ಯುಕೇಶನ್ ಫಂಡ್ ಇವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ೭ ದಿನಗಳ ಗೃಹ ಉತ್ಪನ್ನಗಳ ತರಬೇತಿಯ ಮಂಗಳವಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರು ಪ್ರಾರಂಭದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಕಾಯಕದ ಜೊತೆಯಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಅವರು ಗಮನವನ್ನು ನೀಡಬೇಕು. ಆರ್ಥಿಕವಾಗಿ ಸಹಾಯ/ಸಾಲ ಸೌಲಭ್ಯವನ್ನು ಸ್ಥಳೀಯ ಬ್ಯಾಂಕಿನಿಂದ ಪಡೆದುಕೊಳ್ಳಬಹುದು ಮತ್ತು ಕೇಂದ್ರ-ರಾಜ್ಯ ಸರಕಾರಗಳು ಮಹಿಳಾ ಸ್ವ ಉದ್ಯೋಗಿಗಳಿಗಾಗಿಯೇ ಬ್ಯಾಂಕ್ ಮೂಲಕ ಕೊಡಮಾಡಿದ ವಿವಿಧ ಯೋಜನೆಗಳನ್ನು ತಿಳಿದುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಭಾರತೀಯ ವಿಕಾಸ ಟ್ರಸ್ಟ್‌ನ ಹಿರಿಯ ಯೋಜನಾ ವ್ಯವಸ್ಥಾಪಕ ಪ್ರಶಾಂತ್ ಭಾಗವತ್ ಮಾತನಾಡಿ, ತರಬೇತಿಯನ್ನು ಪಡೆದುಕೊಳ್ಳುವುದು ಯಶಸ್ವೀ ಸ್ವ ಉದ್ಯೋಗಿಗಳಾಗುವಲ್ಲಿ ಇಡುವ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟರು.  ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆ ಸ್ವಉದ್ಯೋಗ ಪ್ರಾರಂಭಿಸುವ ಆಸಕ್ತ ಮಹಿಳೆಯರಿಗೆ  ತರಬೇತಿ ಮಾತ್ರವಲ್ಲ ಮುಂದೆಯೂ ಬೇಕಾದ ಎಲ್ಲ ಮಾರ್ಗದರ್ಶನ ನೀಡಲೂ ಬದ್ಧವಿದೆ ಎಂದು ನುಡಿದರು. 

ಶಿಬಿರಾರ್ಥಿಗಳು ತರಬೇತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 

ಬಿವಿಟಿಯ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ವಂದಿಸಿ, ಕಾರ್ಯಕ್ರಮ ಅಧಿಕಾರಿ ಪ್ರತಿಮಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News