ಬಿಜೆಪಿಯಿಂದ ಸಂವಿಧಾನ ವಿರೋಧಿ ನಡೆ : ಪ್ರಮೋದ್ ಮುತಾಲಿಕ್ ಆರೋಪ
ಉಡುಪಿ, ಸೆ.20: ಕಲಬುರ್ಗಿ ಗಣೇಶೋತ್ಸವಕ್ಕೆ ಪ್ರವೇಶ ನಿಷೇಧಿಸಿರುವುದು ಜಿಲ್ಲಾಧಿಕಾರಿಗಳ ಆಜ್ಞೆ ಅಲ್ಲ, ಇದು ಸರಕಾರದ ಆಜ್ಞೆಯಾಗಿದೆ. ಸರಕಾರ ಅಂದರೆ ಬಿಜೆಪಿ. ಪದೇ ಪದೇ ನನಗೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ಅವರು ತಡೆಯುತ್ತಿರುವುದು ಹಿಂದುತ್ವವನ್ನೇ ಹೊರತು ಮುತಾಲಿಕ್‌ನನ್ನು ಅಲ್ಲ. ಇದು ಸಂವಿಧಾನ ವಿರೋಧಿ ನಡೆ ಮತ್ತು ಸ್ವಾತಂತ್ರ್ಯ ಹರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ನಿಷೇಧ ಮಾಡಿದಾಗ ಬಿಜೆಪಿಯವರು ವಿರೋಧ ಮಾಡಿದ್ದರು. ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ ವಿಧಿಸಿದ್ದರು. ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ಬಿಟ್ಟಿಲ್ಲ. ನಾನು ಮಾತನಾಡಿದರೆ ಗಲಾಟೆಯಾದರೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ ಎಂದರು.
ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ, ಮನೆ ಮನೆಗೆ ಹೋಗಿ ತೆಗೆಯಲಾಗುವುದು. ಮುಸ್ಲಿಮರನ್ನು, ಶತ್ರುಗಳನ್ನು, ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟಲಾಗುತ್ತಿದೆ. ಹಿಂದುಗಳ ಕೊಲೆಯಾಗುವಾಗ ಸಂಘಟನೆ ಗಳಿಗೆ ನೀವು ಬಲ ತುಂಬಬೇಕು. ನ್ಯಾಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.