×
Ad

ಮುಂಬೈ ಬಸ್‌ಗಳಿಗೆ ಉಡುಪಿ ನಗರ ಪ್ರವೇಶ ನಿರ್ಬಂಧ

Update: 2022-09-20 21:02 IST

ಉಡುಪಿ, ಸೆ.20: ಮಂಗಳೂರು ಕಡೆಯಿಂದ ಮುಂಬೈ ಕಡೆಗೆ ಹೋಗುವಂತ ಬಸ್‌ಗಳು ಉಡುಪಿ ನಗರದೊಳಗೆ ಬಾರದೇ ನೇರವಾಗಿ ಬಲಾಯಿಪಾದೆ- ಅಂಬಲಪಾಡಿ- ಕರಾವಳಿ- ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಮೂಲಕವೇ ಹಾದು ಹೋಗಬೇಕು ಎಂದು ಉಡುಪಿ ಬಡಗುಬೆಟ್ಟು ಕೋಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ಇಂದು ನಡೆದ ಬಸ್ ಮಾಲಕರ ಹಾಗೂ ಏಜೆಂಟರ ಸಭೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಯಿತು.

ಸಭೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಡುಪಿ ನಗರ ಪೊಲೀಸ್ ನಿರೀಕ್ಷ ಪ್ರಮೋದ್ ಕುಮಾರ್, ಉಡುಪಿ ನಗರ ಹಾಗೂ ಉಡುಪಿ ಸಂಚಾರ ಠಾಣೆಯ ಎಸ್ಸೈಗಳು ಹಾಜರಿದ್ದರು. ಉಡುಪಿ ನಗರದಲ್ಲಿ ಸಂಚರಿಸುವ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು  ಸಾರ್ವ ಜನಿಕರು ಹಾಗೂ ಇತರೆ ವಾಹನಗಳ ಸುಗಮ ಸಂಚಾರದ ಹಿತ ದೃಷ್ಟಿಯಿಂದ ರಸ್ತೆ ನಿಯಮಗಳನ್ನು ಪಾಲಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಬಸ್‌ಗಳಲ್ಲಿ ವ್ಯಾಕ್ಯೂಮ್ ಹಾರ್ನ್‌ಗಳಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ಬಸ್ ಚಾಲಕರು ಮೊಬೈಲ್ ಬಳಕೆ ಮಾಡದಿರುವ ಬಗ್ಗೆ ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡದಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು. ಬಸ್ಸಿನ ಚಾಲಕರು ಹಾಗೂ ನಿರ್ವಾಹಕರು ಲೈಸೆನ್ಸ್ ಹೊಂದಿರಬೇಕು ಮತ್ತು ಸಮವಸ್ತ್ರ ಧರಿಸಬೇಕು. ಫುಟ್‌ಬೋರ್ಡ್ ಮೇಲೆ ಪ್ರಯಾಣಿಕರನ್ನು ನಿಲ್ಲದಂತೆ ನೋಡಿ ಕೊಳ್ಳಬೇಕು. ಬಸ್‌ಗಳು ನಿಗದಿತ ಬಸ್ ನಿಲ್ದಾಣದ ಬಳಿಯೇ ಬಸ್ಸುಗಳಿಗೆ ಪ್ರಯಾಣಿಕರನ್ನು ಹತ್ತಿಸುವುದು ಹಾಗೂ ಇಳಿಸುವ ಕಾರ್ಯ ಮಾಡಬೇಕು.

ನಗರದ ಸರ್ವಿಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಹಳೆ ಕೆಎಸ್‌ಆಟಿಸಿ ಬಸ್ ನಿಲ್ದಾಣಗಳ ಒಳಗೆ ಅನಾವಶ್ಯಕವಾಗಿ ಹೆಚ್ಚು ಸಮಯ ಬಸ್ಸುಗಳನ್ನು ನಿಲ್ಲಿಸಿ ಕೊಂಡು ಇರಬಾರದು. ಬೆಂಗಳೂರಿಗೆ ಹೋಗುವಂತಹ ಬಸ್‌ಗಳು ರಾತ್ರಿ 8 ಗಂಟೆಯ ನಂತರ ಸರ್ವಿಸ್ ಬಸ್ ನಿಲ್ದಾಣದಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ರಸ್ತೆ ಬದಿ ಬಸ್ಸುಗಳನ್ನು ನಿಲ್ಲಿಸಬಾರದು.

ಕೆಲವು ಬಸ್ಸುಗಳಲ್ಲಿ ಟಿಂಟ್ ಗ್ಲಾಸ್‌ಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು ಕೂಡಲೇ ತೆರವುಗೊಳಸಬೇಕು. ಬಸ್ ಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮೀಸಲಿರುವ ಸೀಟುಗಳಲ್ಲಿ ಕಡ್ಡಾಯವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಬಸ್ ಮಾಲಕರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News