ಅಮಿತ್ ಶಾ ಭೇಟಿಯಿಂದ ಕೋಮು ಸಂಘರ್ಷಕ್ಕೆ ತುಪ್ಪ: ತೇಜಸ್ವಿ ಯಾದವ್ ಆರೋಪ

Update: 2022-09-21 03:55 GMT
ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್

ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಿಹಾರ ಭೇಟಿ ಕೋಮು ಸಂಘರ್ಷಕ್ಕೆ ತುಪ್ಪ ಸುರಿಯುತ್ತದೆ ಹಾಗೂ ಇದು ಇಡೀ ದೇಶಕ್ಕೇ ಗೊತ್ತು ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ.

ಬಿಜೆಪಿಯ ಕಟು ಟೀಕಾಕಾರರಾಗಿರುವ ಯಾದವ್, ಕೇಂದ್ರ ಸಚಿವ ಹಾಗೂ ಬಿಜೆಪಿಯ ಮುಖ್ಯ ತಂತ್ರಗಾರನಾಗಿರುವ ಅಮಿತ್ ಶಾ ವಿರುದ್ಧ ಇಂಥ ಆರೋಪ ಮಾಡಿರುವುದು ಇದೇ ಮೊದಲು.

ಬಿಹಾರಕ್ಕೆ ಬಿಜೆಪಿಯ ಹೊಸ ತಂತ್ರಗಾರಿಕೆಯ ಭಾಗವಾಗಿ ಅಮಿತ್ ಶಾ ಅವರು ರಾಜ್ಯ ಸೀಮಾಂಚಲ ಪ್ರದೇಶಕ್ಕೆ ಈ ತಿಂಗಳ 23-24ರಂದು ಭೇಟಿ ನೀಡುವ ನಿರೀಕ್ಷೆ ಇದೆ. ಪುರ್ನಿಯಾ ಜಿಲ್ಲೆಯಲ್ಲಿ 23ರಂದು ರ‍್ಯಾಲಿ ನಡೆಸುವ ಅವರು, ಮರುದಿನ ಕಿಶನ್‍ಗಂಜ್ ಜಿಲ್ಲೆಯಲ್ಲಿ ಸಾಂಸ್ಥಿಕ ಸಭೆಗಳನ್ನು ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ.

"ಅಮಿತ್ ಶಾ ಬರಲಿದ್ದಾರೆ ಹಾಗೂ ದೇಶಾದ್ಯಂತ ಮತ್ತು ಬಿಹಾರದಲ್ಲಿ ಅವರು ಕೋಮು ಸಾಮರಸ್ಯವನ್ನು ಕದಡಲಿದ್ದಾರೆ. ಬಿಹಾರದ ಜನ ಜಾಗರೂಕರಾಗಿದ್ದಾರೆ. ಅವರಿಗೆ ಮುಂದುವರಿಯಲು ಸಾಧ್ಯವಿಲ್ಲ" ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಹೇಳಿಕೆ ನೀಡಿದ್ದರು.

ಈ ಬಗ್ಗೆ ತೇಜಸ್ವಿ ಯಾದವ್ ಅವರ ಪ್ರತಿಕ್ರಿಯೆ ಕೇಳಿದಾಗ, "ಕೇವಲ ಜೆಡಿಯು ಏಕೆ? ಇಡೀ ಬಿಹಾರಕ್ಕೇ ಅಮಿತ್ ಶಾ ಅವರ ನೈಜ ಉದ್ದೇಶದ ಬಗ್ಗೆ ಅರಿವು ಇದೆ. ಇದನ್ನು ಹೇಳುವ ಅಗತ್ಯವಿಲ್ಲ. ಅವರ ಹೆಸರು ಹೇಳಿದ ತಕ್ಷಣ ಇಡೀ ದೇಶ ಅವರ ಕಾರ್ಯದ ಬಗ್ಗೆ ಮಾತನಾಡಲು ಆರಂಭಿಸುತ್ತದೆ" ಎಂದು ಮಾರ್ಮಿಕವಾಗಿ ನುಡಿದರು. ಈ ಬಗ್ಗೆ ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News