ಮುಂಬೈ ಬಂದರಿನಲ್ಲಿ 22 ಟನ್ ಹೆರಾಯಿನ್ ವಶ
Update: 2022-09-21 23:00 IST
ಹೊಸದಿಲ್ಲಿ, ಸೆ. 21: ಮುಂಬೈಯ ನವಶೇವ ಬಂದರಿನಲ್ಲಿ 22 ಟನ್ ಹೆರಾಯಿನ್ ಲೇಪಿತ ಲಿಕರಿಸ್ ಸಸ್ಯದ ಬೇರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು ಬುಧವಾರ ತಿಳಿಸಿದೆ.
ಇದು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1,725 ಕೋಟಿ ರೂಪಾಯಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ದೇಶದ ಅತಿ ದೊಡ್ಡ ಪ್ರಮಾಣದ ಹೆರಾಯಿನ್ ವಶ ಪ್ರಕರಣಗಳ ಪೈಕಿ ಒಂದಾಗಿದೆ.
‘‘ಮಾದಕ ದ್ರವ್ಯವನ್ನು ಒಳಗೊಂಡ ಕಂಟೇನರನ್ನು ದಿಲ್ಲಿಗೆ ಸಾಗಿಸಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆಯು ನಮ್ಮ ದೇಶವನ್ನು ಯಾವ ರೀತಿಯಲ್ಲಿ ಕಾಡುತ್ತಿದೆ ಮತ್ತು ನಮ್ಮ ದೇಶಕ್ಕೆ ಮಾದಕ ದ್ರವ್ಯವನ್ನು ಕಳುಹಿಸಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನರು ಯಾವ ವಿಧಾನಗಳನ್ನು ಬಳಸುತ್ತಿದ್ದಾರೆ ಎನ್ನುವುದನ್ನು ಈ ಪ್ರಕರಣ ತೋರಿಸುತ್ತಿದೆ’’ ಎಂದು ವಿಶೇಷ ಪೊಲೀಸ್ ಕಮಿಶನರ್ ಎಚ್.ಜಿ.ಎಸ್. ದಲಿವಾಲ್ ಹೇಳಿದರು.
ಈ ಕುರಿತ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.