×
Ad

ಮಮತಾ ಬ್ಯಾನರ್ಜಿ ಮೇಲೆ ನೀವು ಯಾವ ಮ್ಯಾಜಿಕ್ ಮಾಡಿದಿರಿ?: ಉಪರಾಷ್ಟ್ರಪತಿಗೆ ಅಶೋಕ್ ಗೆಹ್ಲೋಟ್ ಪ್ರಶ್ನೆ

Update: 2022-09-21 23:03 IST
photo ; NDTV 

ಜೈಪುರ, ಸೆ. 21: ಕಳೆದ ತಿಂಗಳು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ಹೊರಗುಳಿದಿರುವುದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾಗ, ಮಮತಾ ಏನೇ ಹೇಳಿದರೂ ನಾನು ಅವರ ಘನತೆಗೆ ವಿರುದ್ಧವಾಗಿ ಒಂದೇ ಒಂದು ಮಾತು ಆಡಿಲ್ಲ ಎಂದು ಧನ್‌ಕರ್ ಹೇಳಿದರು. ‘‘ನಾನು ಏನು ಹೇಳಿರುವೆನೋ ಅದನ್ನು ಸಾರ್ವಜನಿಕವಾಗಿ ಮತ್ತು ಲಿಖಿತ ರೂಪದಲ್ಲಿ ಹೇಳಿದ್ದೇನೆ’’ ಎಂದರು.

ರಾಜಸ್ಥಾನ ವಿಧಾನಸಭೆಯಲ್ಲಿ ಮಂಗಳವಾರ ನಡೆದ ತನ್ನ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘‘ನಾನು ಈಗ ನಿಮ್ಮ ರಾಜ್ಯದ ರಾಜ್ಯಪಾಲ ಅಲ್ಲ. ನಾನು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನಾದರೂ ಹೇಳಿದ್ದೇನೆಯೇ ಎಂದು ಎದೆಯ ಮೇಲೆ ಕೈಯಿಟ್ಟುಕೊಂಡು ಒಮ್ಮೆ ಯೋಚಿಸಿ ಎಂದು ನಾನು ಅವರಿಗೆ (ಮಮತಾ) ಹೇಳಿದೆ. ಅವರು ಏನೇ ಹೇಳಿದರೂ, ಅವರ ಘನತೆಗೆ ವಿರುದ್ಧವಾಗಿ ನಾನು ಒಂದೇ ಒಂದು ಮಾತನ್ನು ಯಾವತ್ತಾದರೂ ಆಡಿದ್ದೇನೆಯೇ. ನಾನು ಏನೇ ಮಾಡಿದ್ದರೂ ಅದು ಸಾರ್ವಜನಿಕವಾಗಿತ್ತು ಮತ್ತು ಲಿಖಿತ ರೂಪದಲ್ಲಿತ್ತು. ಹಾಗಿದ್ದರೂ, ನಾನು ಈ ಸದನದ ಮೂಲಕ ಆಕೆಯ ಕ್ರಮಕ್ಕೆ ಮೊದಲ ಬಾರಿಗೆ ಧನ್ಯವಾದ ಹೇಳುತ್ತಿದ್ದೇನೆ’’ ಎಂದರು.

ಧನ್‌ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ, ಅವರು ಮತ್ತು ಮಮತಾ ಬ್ಯಾನರ್ಜಿ ನಡುವೆ ಸುದೀರ್ಘ ಸಂಘರ್ಷ ನಡೆಯುತ್ತಿತ್ತು.

ಇದಕ್ಕೂ ಮೊದಲು, ‘‘ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ಹೊರಗುಳಿಯುವಂತೆ ಮಾಡುವುದಕ್ಕಾಗಿ ಜೋರಿನ ಮಹಿಳೆ ಮಮತಾ ಮೇಲೆ ನೀವು ಯಾವ ಮ್ಯಾಜಿಕ್ ಮಾಡಿದಿರಿ?’’ ಎಂಬುದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಲಘು ಧಾಟಿಯಲ್ಲಿ ಕೇಳಿದ ಬಳಿಕ ಧನ್‌ರಾಜ್ ಈ ಮಾತುಗಳನ್ನು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News