×
Ad

ಹಿಜಾಬ್ ವೈವಿಧ್ಯವನ್ನು ಉತ್ತೇಜಿಸಿ, ಮಕ್ಕಳನ್ನು ಸಾಂಸ್ಕೃತಿಕವಾಗಿ ಸಂವೇದನೆಗೊಳಿಸಬಲ್ಲದು: ಸುಪ್ರೀಂ ಕೋರ್ಟ್

Update: 2022-09-22 11:47 IST

ಹೊಸದಿಲ್ಲಿ, ಸೆ.22: ಹೆಣ್ಣುಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್(Hijab) ಧರಿಸಲು ಅವಕಾಶ ಮಾಡಿಕೊಡುವುದನ್ನು, ಪರಿಣಾಮ ಬೀರುವ ವಯಸ್ಸಿನಲ್ಲಿ ಮಕ್ಕಳು ಭಾರತದ ವೈವಿಧ್ಯದ ಬಗ್ಗೆ ಕಲಿಯಲು ಮಾಡಿಕೊಡುವ ಅವಕಾಶವನ್ನಾಗಿಯೂ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ (Supreme court) ಅಭಿಪ್ರಾಯಪಟ್ಟಿದೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಕರಣಗಳ ಮುಂದುವರಿದ ವಿಚಾರಣೆ ವೇಳೆ ಬುಧವಾರ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು hindustantimes.com ವರದಿ ಮಾಡಿದೆ.

ವಸ್ತ್ರಸಂಹಿತೆಯಲ್ಲಿ ಏಕರೂಪತೆಯನ್ನು ತರುವುದು ಕರ್ನಾಟಕ ಸರಕಾರದ ಪ್ರಮುಖ ವಾದವಾಗಿದ್ದು, ತರಗತಿಯಲ್ಲಿ ವೈವಿಧ್ಯಕ್ಕೆ ಅವಕಾಶ ನೀಡುವ ಮೂಲಕ ಮಕ್ಕಳನ್ನು ಸಾಂಸ್ಕೃತಿಕವಾಗಿ ಸಂವೇದನೆಗೊಳಿಸುವ ಸಾಧ್ಯತೆಯನ್ನೂ ನಿರ್ಲಕ್ಷಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧೂಲಿಯಾ ಅವರನ್ನು ಒಳಗಂಡ ಪೀಠ ಸ್ಪಷ್ಟಪಡಿಸಿದೆ.

"ಇದು ವೈವಿಧ್ಯಕ್ಕೆ ತೆರೆದುಕೊಳ್ಳಲು ಇರುವ ಅವಕಾಶ ಎಂದೂ ಹೇಳಬಹುದು. ಎಲ್ಲ ಸಂಸ್ಕೃತಿ, ಧರ್ಮಗಳ ವಿದ್ಯಾರ್ಥಿಗಳೂ ಇರುತ್ತಾರೆ. ದೇಶದ ವೈವಿಧ್ಯದ ಬಗ್ಗೆ ನೋಡಿ, ಅವರ ಬಗ್ಗೆ ಸಾಂಸ್ಕೃತಿಕವಾಗಿ ಸಂವೇದನೆ ಬೆಳೆಸಿಕೊಳ್ಳಿ" ಎಂದು ಕರ್ನಾಟಕ ಸರಕಾರದ ಮತ್ತು ಹಿಜಾಬ್ ನಿಷೇಧ ಬೆಂಬಲಿಸುವ ಶಿಕ್ಷಕರ ಪರ ವಾದ ಮಂಡಿಸಿದ ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ ಸಲಹೆ ಮಾಡಿತು.

ಈ ಬಗೆಯ ಗೊಂದಲಗಳಿಂದ ಶಾಲೆಯನ್ನು ಮುಕ್ತವಾಗಿಸುವುದು ನಮ್ಮ ಉದ್ದೇಶ ಎಂದು ಶಿಕ್ಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್.ವೆಂಕಟರಮಣಿ ಅವರಿಗೆ, "ಇವೆಲ್ಲವೂ ನಮ್ಮ ದೃಷ್ಟಿಕೋನವನ್ನು ಅವಲಂಬಿಸಿದೆ" ಎಂದು ನ್ಯಾಯಪೀಠ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News