ವಿಶೇಷ ವಿಧಾನಸಭಾ ಅಧಿವೇಶನಕ್ಕೆ ಹೊಸ ಶಿಫಾರಸು ಮಾಡಿದ ಆಮ್ ಆದ್ಮಿ ಪಕ್ಷ
Update: 2022-09-22 12:23 IST
ಚಂಡಿಗಢ: ಬಹುಮತ ಸಾಬೀತುಪಡಿಸಲು ವಿಶೇಷ ವಿಧಾನಸಭಾ ಅಧಿವೇಶನ ಕರೆಬೇಕೆಂಬ ಬೇಡಿಕೆ ಇಟ್ಟು ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹೊಸ ಶಿಫಾರಸು ಮಾಡಿದೆ. ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿಶೇಷ ಅಧಿವೇಶನ ಕರೆಯಬೇಕೆಂಬ ಪಂಜಾಬ್ ಸಂಪುಟದ ಬೇಡಿಕೆಯನ್ನು ತಿರಸ್ಕರಿಸಿದ ನಂತರ ಮತ್ತೊಮ್ಮೆ ಶಿಫಾರಸು ಮಾಡಲಾಗಿದೆ. ಈ ಮೂಲಕ ಪಂಜಾಬ್ ರಾಜ್ಯಪಾಲರೊಂದಿಗೆ ಆಪ್ ಹೋರಾಟವನ್ನು ಹೆಚ್ಚಿಸಿದೆ.
ಬಿಜೆಪಿ ತನ್ನ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಭಗವಂತ್ ಮಾನ್ (Bhagwant Mann) ನೇತೃತ್ವದ ಸರಕಾರ, ತನ್ನ ಎಲ್ಲಾ ಶಾಸಕರು ಪಕ್ಷದೊಂದಿಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸಲು ಬಯಸಿದೆ.
ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಸರಕಾರ ಕಳೆದ ತಿಂಗಳು ದಿಲ್ಲಿಯಲ್ಲಿ ಇದೇ ರೀತಿಯ ಬಹುಮತದ ಪರೀಕ್ಷೆಯಲ್ಲಿ ಜಯ ಗಳಿಸಿದ್ದು, ಎಎಪಿ ಸರಕಾರವನ್ನು ಉರುಳಿಸಲು ಬಿಜೆಪಿಯು "ಆಪರೇಷನ್ ಕಮಲ" ನಡೆಸಿದೆ ಎಂದು ಆರೋಪಿಸಿತ್ತು.