"ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡಲಾದ ಮೀಸಲಾತಿ ಸಾಮಾನ್ಯ ವರ್ಗಗಳ ಅವಕಾಶಗಳನ್ನು ಕಡಿಮೆಗೊಳಿಸುವುದಿಲ್ಲವೇ?"

Update: 2022-09-22 11:06 GMT

ಹೊಸದಿಲ್ಲಿ: ಆರ್ಥಿಕವಾಗಿ ದುರ್ಬಲ ವರ್ಗಗಳವರಿಗೆ ಒದಗಿಸಲಾಗುವ ಶೇ. 10 ಮೀಸಲಾತಿಯು ಕೇವಲ ಮೆರಿಟ್‌ ಆಧಾರದಲ್ಲಿ ಉದ್ಯೋಗ ಗಿಟ್ಟಿಸಬಹುದಾದ ಸಾಮಾನ್ಯ ವರ್ಗದವರ ಅವಕಾಶಗಳನ್ನು ಕಡಿಮೆಗೊಳಿಸುತ್ತಿದೆಯೇ ಎಂದು ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್‌( Supreme Court) ಪ್ರಶ್ನಿಸಿದೆ ಎಂದು Bar and Bench ವರದಿ ಮಾಡಿದೆ.

ಸರಕಾರದ ಶೇ. 10 ಮೀಸಲಾತಿಯು ವಾರ್ಷಿಕ ವರಮಾನ ರೂ. 8 ಲಕ್ಷಕ್ಕಿಂತ ಕಡಿಮೆಯಿರುವ ಕುಟುಂಬಗಳಿಗೆ ಅನ್ವಯವಾಗುವುದರಿಂದ ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿವೆ.

ಸಾಮಾನ್ಯ ಅಥವಾ ಮೀಸಲಾತಿಯಿಲ್ಲದ ವರ್ಗದಿಂದ ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾ ಸೃಷ್ಟಿಸಿರುವ ಕೇಂದ್ರದ ಕ್ರಮವನ್ನು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರ ನೇತೃತ್ವದ ಪಂಚ ಸದಸ್ಯರ ನಿಯೋಗ ಪ್ರಶ್ನಿಸಿದೆ.

ʻʻಸಾಮಾನ್ಯ ವರ್ಗದಲ್ಲಿ ಕೇವಲ ಮೆರಿಟ್‌ ಆಧಾರದಲ್ಲಿ ಸೀಟ್‌ ಪಡೆಯಬಹುದಾದ ಜನರ ಪಾಲನ್ನು ನೀವು ಈಗ ಕಡಿಮೆಗೊಳಿಸುತ್ತಿದ್ದೀರಿ. ಒಂದು ವೇಳೆ ಮುಸ್ಲಿಂ ಅಭ್ಯರ್ಥಿಗಳಿಗೆ ಶೇ. 5 ಸೀಟುಗಳಿದ್ದರೆ ಹಾಗೂ ಇದಕ್ಕಿಂತಲೂ ಹೆಚ್ಚು ಮೆರಿಟ್‌ ಅಭ್ಯರ್ಥಿಗಳು ಆ ಸಮುದಾಯದಲ್ಲಿದ್ದರೆ ಈ ವಿಭಾಗದಲ್ಲಿ ಮೀಸಲಾತಿ ಪಡೆದ ಕೊನೆಯ ವ್ಯಕ್ತಿ ಕೈಬಿಟ್ಟವರಿಗಿಂತ ಕಡಿಮೆ ಮೆರಿಟ್‌ ಹೊಂದಿರಬಹುದು. ಮುಕ್ತ ಸಾಮಾನ್ಯ ವಿಭಾಗವು ಮುಕ್ತವಾಗಿರಬೇಕು,ʼʼ ಎಂದು  ಮುಖ್ಯ ನ್ಯಾಯಮೂರ್ತಿ ಹೇಳಿದರಲ್ಲದೆ  ಇದು ಸಂವಿಧಾನದ ಮೂಲ ಸಂರಚನೆಯನ್ನು ಉಲ್ಲಂಘಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಮಾತನಾಡಿ, ಮೀಸಲಾತಿಗಳು ಸಂವಿಧಾನದ ಮೂಲ ಸಂರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರಲ್ಲದೆ ಈ ಮೀಸಲಾತಿಯು ಬಡವರನ್ನು ಮೇಲೆತ್ತಲು ಸಹಾಯ ಮಾಡುವುದರಿಂದ ಸಾಮಾನ್ಯ ವರ್ಗಗಳು ಅದನ್ನು ಸ್ವಾಗತಿಸಬೇಕು ಎಂದರು.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಇದೇ ಮೊದಲ ಬಾರಿಗೆ ನೀಡಲಾಗಿದೆ. ಇನ್ನೊಂದೆಡೆ ಪರಿಶಿಷ್ಟ ಜಾತಿ, ವರ್ಗಗಳಿಗೆ  ಈಗಾಗಲೇ ಹಲವು ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ನ 'ಒಬ್ಬ ವ್ಯಕ್ತಿಗೆ ಒಂದು ಹುದ್ದೆ' ನಿಯಮ ಬೆಂಬಲಿಸಿದ ರಾಹುಲ್ ಗಾಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News