COVID-19 ಸಮಯದಲ್ಲಿ ಭಾರತೀಯರಿಂದ ಧಾರ್ಮಿಕ ಸಂಸ್ಥೆಗಳಿಗೆ 16,600 ಕೋಟಿ ರೂ. ದಾನ !

Update: 2022-09-22 17:02 GMT
ಸಾಂದರ್ಭಿಕ ಚಿತ್ರ (credit: india.com) 

ಹೊಸದಿಲ್ಲಿ: COVID-19 ಸಾಂಕ್ರಾಮಿಕ ಸಮಯದಲ್ಲಿ (ಅಕ್ಟೋಬರ್ 2020 ಮತ್ತು ಸೆಪ್ಟೆಂಬರ್ 2021 ರ ನಡುವೆ) ಭಾರತೀಯ ಕುಟುಂಬಗಳು ದೇಣಿಗೆ(donations) ನೀಡಲು 'ಧಾರ್ಮಿಕ ನಂಬಿಕೆ'(religious belief) ದೊಡ್ಡ ಪ್ರೇರಕ ಅಂಶವಾಗಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಭಾರತೀಯರು ಹೆಚ್ಚಾಗಿ ಧಾರ್ಮಿಕ ಸಂಸ್ಥೆಗಳಿಗೆ ಅಂದಾಜು 16,600 ಕೋಟಿ ರೂ.ಗಳನ್ನು ದಾನವಾಗಿ ನೀಡಿದ್ದಾರೆ ಎಂದು ಅಧ್ಯಯನ ಕಂಡುಹಿಡಿದಿದೆ ಎಂದು thewire.in ವರದಿ ಮಾಡಿದೆ.

ಅಶೋಕ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಸೋಶಿಯಲ್ ಇಂಪ್ಯಾಕ್ಟ್ ಅಂಡ್ ಫಿಲಾಂತ್ರಪಿಯ ‘How India Gives | 2020-21’ ಹೆಸರಿನ ಅಧ್ಯಯನ ವರದಿಯು ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಿದ್ದು, ಭಾರತೀಯರು ಪರೋಪಕಾರಿ ಕಾರಣಗಳಿಗೆ ದೇಣಿಗೆ ನೀಡುವ ಔಪಚಾರಿಕ ಮತ್ತು ಅನೌಪಚಾರಿಕ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಈ ಅಧ್ಯಯನವನ್ನು ನಡೆಸಲಾಗಿದೆ ಎಂದು theWire.com ವರದಿ ಹೇಳಿದೆ. 

ಸಮೀಕ್ಷೆಗೆ ಒಳಗಾದ ಕುಟುಂಬಗಳು, COVID-19 ಸಾಂಕ್ರಾಮಿಕದ ಎರಡನೇ ಅಲೆಯ ಅವಧಿಯಲ್ಲಿ,  'ಧಾರ್ಮಿಕೇತರ ಸಂಸ್ಥೆಗಳಿಗೆ' ಕನಿಷ್ಠ ದೇಣಿಗೆ ನೀಡಿರುವುದಾಗಿ ಹೇಳಿದೆ. ಅಧ್ಯಯನದ ಪ್ರಕಾರ, ಕೇವಲ 1,100 ಕೋಟಿ ರೂ. ಮಾತ್ರ ಇಂತಹ ಧಾರ್ಮಿಕೇತರ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ. ಈ ಸಂಸ್ಥೆಗಳಲ್ಲಿ ಎನ್‌ಜಿಒಗಳು, ಟ್ರಸ್ಟ್‌ಗಳು, ಶಾಲೆಗಳು, PM-CARES, ಮುಂಚೂಣಿಯ ಕಾರ್ಯಕರ್ತರು (frontline warriors), ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕರ್ತರು ಇತ್ಯಾದಿಗಳು ಸೇರಿವೆ.

ದೇಣಿಗೆ ಪಡೆಯುವ ವಿಚಾರದಲ್ಲಿ ಧಾರ್ಮಿಕ ಸಂಸ್ಥೆಗಳ ನಂತರದ ಸ್ಥಾನವನ್ನು ಭಿಕ್ಷುಕರು ಪಡೆದಿದ್ದಾರೆ ಎಂದು ಅಧ್ಯಯನ ಕಂಡುಕೊಂಡಿದೆ.

“ಕುಟುಂಬಗಳು 'ಧಾರ್ಮಿಕ ಸಂಸ್ಥೆಗಳಿಗೆ' (64%), 'ಭಿಕ್ಷುಕರು' (61%), 'ಕುಟುಂಬ ಮತ್ತು ಸ್ನೇಹಿತರು' (9%), ʼಧಾರ್ಮಿಕೇತರ ಸಂಸ್ಥೆಗಳು' (5%), ಮತ್ತು 'ಗೃಹ ಸಿಬ್ಬಂದಿ' (4%)ಗಳಿಗೆ ಕ್ರಮವಾಗಿ ದೇಣಿಗೆ ನೀಡಿದ್ದಾರೆ" ಎಂದು ಅಧ್ಯಯನ ಹೇಳಿದೆ.

ಈ ಸಂಶೋಧನೆಗಳು 18 ರಾಜ್ಯಗಳಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡು 81,000 ಕುಟುಂಬಗಳ ಸಮೀಕ್ಷೆಯನ್ನು ಆಧರಿಸಿವೆ. ಸಮೀಕ್ಷೆಯನ್ನು ಆರು ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ನಡೆಸಲಾಗಿದೆ.

ಕುಟುಂಬಗಳ ಸಾಮಾಜಿಕ-ಆರ್ಥಿಕ ವರ್ಗೀಕರಣ (SEC), ಅಥವಾ ಶ್ರೀಮಂತಿಕೆಯ ಮಟ್ಟವನ್ನು ಆಧರಿಸಿ ಸಮೀಕ್ಷೆಯನ್ನು ನಡೆಸಲಾಗಿದೆ.

ಇದನ್ನೂ ಓದಿ: ಮೌಲ್ವಿಯೊಬ್ಬರನ್ನು ಮಸೀದಿಯಲ್ಲಿ ಭೇಟಿ ಮಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News