ಬ್ಯಾಂಕ್ ಸಾಲ ವಂಚನೆ ಪ್ರಕರಣ : ಎಬಿಜಿ ಶಿಪ್‌ಯಾರ್ಡ್‌ನ 2747 ಕೋಟಿ ರೂ. ಮೌಲ್ಯದ ಆಸ್ತಿಬ್ಯಾಂಕ್ ಸಾಲ ವಂಚನ ಮುಟ್ಟುಗೋಲು

Update: 2022-09-22 16:31 GMT

 ಹೊಸದಿಲ್ಲಿ,ಸೆ.21: ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ವಿರುದ್ಧ ನಡೆಯುತ್ತಿರುವ ಕಪ್ಪುಹಣ ಬಿಳಪು ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಸಾಲ ವಂಚನೆ ಆರೋಪದ ಕುರಿತಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು,, ಆ ಕಂಪೆನಿಗೆ ಸೇರಿದ 2747 ಕೋಟಿ ರೂ. ಮೌಲ್ಯದ ಆಸ್ತಿಗಳು ಹಾಗೂ ಬ್ಯಾಂಕ್ ಠೇವಣಿಯನ್ನು ವಶಪಡಿಸಿಕೊಂಡಿದೆ.

  ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಗುಜರಾತ್‌ನ ಸೂರತ್ ಹಾಗೂ ದಹೇಜ್ ಜಿಲ್ಲೆಯಲ್ಲಿರುವ ಶಿಪ್‌ಯಾರ್ಡ್‌ಗಳು, ಕೃಷಿ ಜಮೀನುಗಳು ಹಾಗೂ ನಿವೇಶನಗಳು, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿರುವ ವಿವಿಧ ವಾಣಿಜ್ಯ ಹಾಗೂ ವಸತಿ ಪ್ರದೇಶಗಳು ಹಾಗೂ ಬ್ಯಾಂಕ್ ಖಾತೆಗಳು ವಶಪಡಿಸಿಕೊಳ್ಳಲಾದ ಸೊತ್ತುಗಳಲ್ಲಿ ಸೇರಿವೆ.

  ಕಪ್ಪುಹಣ ಬಿಳುಪು ಕಾಯ್ದೆಯಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾದ ಸೊತ್ತುಗಳ ಒಟ್ಟು ಮೌಲ್ಯವು 2,747.69 ಕೋಟಿ ರೂ. ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥಾಪಕ ರಿಶಿ ಕಮಲೇಶ್ ಅಗರ್‌ವಾಲ್ ಅವರನ್ನು ಬಂಧಿಸಿದ ಮರುದಿನವೇ ಜಾರಿ ನಿರ್ದೇಶನನಾಲಯ ವು ಕಂಪೆನಿಯ ಸೊತ್ತುಗಳಿಗೆ ಮುಟ್ಟುಗೋಲು ಹಾಕಿದೆ.

  ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಸಂಸ್ಥೆಯು ಕಂಪೆನಿಯ ವಿರುದ್ಧ ಎಫ್‌ಐಆರ್‌ದಾಖಲಿಸಿತ್ತು. ಇದರ ಭಾಗವಾಗಿ ಜಾರಿ ನಿರ್ದೇಶನಾಲಯ ಕಪ್ಪುಹಣ ಬಿಳುಪು ಪ್ರಕರಣದ ತನಿಖೆ ನಡೆಸುತ್ತಿದೆ.

 ಭಾರತೀಯ ಸ್ಟೇಟ್ ಬ್ಯಾಂಕ್ ಎಬಿಜಿ ಶಿಪ್‌ಯಾರ್ಡ್ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ, ಕ್ರಿಮಿನಲ್ ಸ್ವರೂಪದ ವಿಶ್ವಾಸದ್ರೋಹ ಹಾಗೂ ಭಾರತೀಯ ದಂಡಸಂಹಿತೆಯಡಿ ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News