ನ್ಯಾಯಾಂಗ ನಿಂದನೆ ಪ್ರಕರಣ : ಇಮ್ರಾನ್‍ಖಾನ್ ಕ್ಷಮೆಯಾಚನೆ

Update: 2022-09-22 16:38 GMT

ಇಸ್ಲಮಾಬಾದ್, ಸೆ.22: ಮಹಿಳಾ ನ್ಯಾಯಾಧೀಶರ ವಿರುದ್ಧ ತಾನು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಲು ಬಯಸುವುದಾಗಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಹೇಳಿದ ಹಿನ್ನೆಲೆಯಲ್ಲಿ, ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪಾಕಿಸ್ತಾನದ  ನ್ಯಾಯಾಲಯ ಮುಂದೂಡಿದೆ.

ನ್ಯಾಯಾಲಯ ಬಯಸುವುದಾದರೆ, ಮಹಿಳಾ ನ್ಯಾಯಾಧೀಶರ ಬಳಿಗೆ ಹೋಗಿ ಕ್ಷಮೆ ಯಾಚಿಸುತ್ತೇನೆ. ನಾನು ಎಂದಿಗೂ ನ್ಯಾಯಾಲಯ ಅಥವಾ ನ್ಯಾಯಾಂಗದ ಭಾವನೆಗೆ ಧಕ್ಕೆ ತರುವ ಯಾವುದನ್ನೂ ಹೇಳುವುದಿಲ್ಲ. ಭವಿಷ್ಯದಲ್ಲಿ ಈ ರೀತಿ ವರ್ತಿಸುವುದಿಲ್ಲ ಮತ್ತು ನಾನು ಕೆಂಪು ಗೆರೆಯನ್ನು ದಾಟಿದ್ದರೆ ಕ್ಷಮಿಸಿ  ಎಂದು ಗುರುವಾರ ಇಸ್ಲಮಾಬಾದ್ ಹೈಕೋರ್ಟ್‍ನ  ಕಲಾಪದ ಸಂದರ್ಭ ಇಮ್ರಾನ್ ಹೇಳಿದ್ದಾರೆ.

ಆಗಸ್ಟ್ 20ರಂದು ಇಸ್ಲಮಾಬಾದ್‍ನಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಮಾತನಾಡಿದ್ದ ಇಮ್ರಾನ್, ತನ್ನ ಆಪ್ತ ಶಹಬಾಝ್ ಗಿಲ್‍ನನ್ನು ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಈ ಬಗ್ಗೆ ನ್ಯಾಯಾಧೀಶರಾದ ಝೇಬಾ ಚೌಧರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮತ್ತು ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ಇಮ್ರಾನ್ ಕನಿಷ್ಟ 5 ವರ್ಷ ಯಾವುದೇ ಸಾರ್ವಜನಿಕ ಹುದ್ದೆ ನಿರ್ವಹಿಸುವಂತಿಲ್ಲ.

ಇದೀಗ ಖಾನ್ ಅವರ ಕ್ಷಮಾಯಾಚನೆಯ ಹಿನ್ನೆಲೆಯಲ್ಲಿ, ತನ್ನ ಹೇಳಿಕೆಯನ್ನು ಅಕ್ಟೋಬರ್ 3ರ ಮೊದಲು ಅಫಿದಾವಿತ್ ಮೂಲಕ ಸಲ್ಲಿಸುವಂತೆ ನ್ಯಾಯಾಲಯ ಇಮ್ರಾನ್‍ಖಾನ್‍ಗೆ ಸೂಚಿಸಿದ್ದು, ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಮುಂದೂಡಿದೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News